ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ 76ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರ ಶಾಲಾ ದಿನಗಳ ಶಿಕ್ಷಕ ಎಚ್.ಸಿ. ಪಟೇಲ್ ಅವರು ಹಲವು ಹಳೆಯ ನೆನಪುಗಳನ್ನು ಹಂಚಿಕೊಳ್ಳುವುದರೊಂದಿಗೆ ಅನೇಕ ರೋಚಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
1965ರಿಂದ 1967ರವರೆಗೆ ವಡ್ನಗರದ ಬಿಎನ್ ಹೈಸ್ಕೂಲ್ನಲ್ಲಿ ಗಣಿತ ಮತ್ತು ವಿಜ್ಞಾನ ಬೋಧಿಸಿದ್ದ ಪಟೇಲ್, ಮೋದಿ ಚುರುಕು ವಿದ್ಯಾರ್ಥಿಯಾಗಿದ್ದರು ಹಾಗೂ ಶಾಲೆಯ ಬಹುತೇಕ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಶಾಲೆಯಲ್ಲಿ ಪ್ರತಿ ಗುರುವಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮೋದಿ ಸ್ವಾಮಿ ವಿವೇಕಾನಂದ ಸೇರಿದಂತೆ ಹಲವು ನಾಯಕರ ಕುರಿತು ಭಾಷಣ ಮಾಡುತ್ತಿದ್ದರು ಎಂದು ಪಟೇಲ್ ನೆನಪಿಸಿಕೊಂಡಿದ್ದಾರೆ.
ಶಾಲೆಯ ಆವರಣದ ಗೋಡೆ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಆಯೋಜಿಸಿದ್ದ ನಾಟಕದಲ್ಲಿ ಮೋದಿ ‘ಜೋಗಿದಾಸ್ ಖುಮಾನ್’ ಪಾತ್ರ ನಿರ್ವಹಿಸಿದ್ದರು. ಕೈಯಲ್ಲಿ ಕತ್ತಿ ಹಿಡಿದು ಕಠಿಯಾವಾಡಿ ಭಾಷೆಯಲ್ಲಿ ಸಂಭಾಷಣೆ ಹೇಳಿದ ಅವರ ಅಭಿನಯಕ್ಕೆ ಸುಮಾರು 10 ಸಾವಿರ ಮಂದಿ ಪ್ರೇಕ್ಷಕರು 10 ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದ್ದರು. ಮೋದಿ ಶಾಲಾ ದಿನಗಳಲ್ಲಿ ವಿವಿಧ ಧರ್ಮಗಳ ಸ್ನೇಹಿತರೊಂದಿಗೆ ಆತ್ಮೀಯವಾಗಿದ್ದರು. 11ನೇ ತರಗತಿಯಲ್ಲಿ ತಮ್ಮ ಮುಸ್ಲಿಂ ಸಹಪಾಠಿಯೊಬ್ಬರನ್ನು ಮನೆಗೆ ಕರೆದುಕೊಂಡು ಬಂದು ಒಟ್ಟಿಗೆ ಊಟ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಅಲ್ಲದೆ ವಡ್ನಗರದ ಶರ್ಮಿಷ್ಠಾ ಕೆರೆ ಮೋದಿ ಅವರ ನೆಚ್ಚಿನ ಸ್ಥಳವಾಗಿತ್ತು. ಈಜು ಕಲಿಯುವ ಆಸಕ್ತಿಯಿದ್ದ ಅವರು ಒಮ್ಮೆ ಕೆರೆಯಿಂದ ಮೊಸಳೆಯ ಮರಿಯನ್ನು ಮನೆಗೆ ತಂದಿದ್ದರು. ಆದರೆ ತಾಯಿ ಹೀರಾಬೆನ್ ಅವರ ಸೂಚನೆಯಂತೆ ಅದನ್ನು ಮತ್ತೆ ಕೆರೆಗೆ ಬಿಟ್ಟಿದ್ದರು ಎಂದು ಪಟೇಲ್ ತಿಳಿಸಿದ್ದಾರೆ.



