ಉಜಿರೆ: “ಸಾಮಾನ್ಯರು ಸಿಗುವ ಅವಕಾಶಕ್ಕಾಗಿ ಕಾಯುತ್ತಿದ್ದರೆ, ಅಸಾಮಾನ್ಯರು ತಮಗಾಗಿ ಹೊಸ ಅವಕಾಶಗಳನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ. ತರಬೇತಿಯ ಮೂಲಕ ನೀವು ಗಳಿಸಿರುವ ಕೌಶಲ್ಯವನ್ನು ಕೇವಲ ಕೆಲಸ ಗಿಟ್ಟಿಸಿಕೊಳ್ಳಲು ಬಳಸದೆ, ಮತ್ತೊಬ್ಬರಿಗೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆಯಬೇಕು” ಎಂದು ನಿಕಟಪೂರ್ವ ವಿಧಾನ ಪರಿಷತ್ ಸದಸ್ಯರು ಹಾಗೂ ಕೇಂದ್ರೀಯ ನೋಟರಿ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅಭಿಪ್ರಾಯಪಟ್ಟರು.
Sponsoredಉಜಿರೆಯ ಸಿದ್ಧವನದಲ್ಲಿರುವ ಪ್ರಸಿದ್ಧ ರುಡ್ಸೆಟ್ ಸಂಸ್ಥೆಯು ಹಮ್ಮಿಕೊಂಡಿದ್ದ 1000ನೇ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಮತ್ತು 998ನೇ ಕಂಪ್ಯೂಟರ್ ಅಕೌಂಟಿಂಗ್ (ಟ್ಯಾಲಿ) ತರಬೇತಿ ಶಿಬಿರಗಳ ಜಂಟಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಪ್ರೇರಣಾದಾಯಿ ಮಾತುಗಳನ್ನಾಡಿದರು.
“ಇಂದಿನ ತೀವ್ರ ಸ್ಪರ್ಧಾತ್ಮಕ ವಾತಾವರಣದಲ್ಲಿ ಬರೀ ಪದವಿ ಪ್ರಮಾಣಪತ್ರ ಹೊಂದಿದ್ದರೆ ಸಾಲದು. ಅದು ನಿಮ್ಮ ವಿದ್ಯಾಭ್ಯಾಸವನ್ನು ಮಾತ್ರ ಸೂಚಿಸುತ್ತದೆ; ಆದರೆ ನಿಮ್ಮಲ್ಲಿರುವ ಕೌಶಲ್ಯ ಸಾಮರ್ಥ್ಯವನ್ನು ತೋರಿಸುತ್ತದೆ. ನೀವು ನೀಡುವ ಕೆಲಸದ ನಿಖರತೆ ಮತ್ತು ಗುಣಮಟ್ಟವೇ ಮಾರುಕಟ್ಟೆಯಲ್ಲಿ ನಿಮಗೊಂದು ಶಾಶ್ವತ ಗುರುತನ್ನು ನಿರ್ಮಿಸಿಕೊಡುತ್ತದೆ” ಎಂದರು. ಫೋಟೋಗ್ರಫಿ, ಡ್ರೋನ್ ಸೇವೆ, ವಿಡಿಯೋ ಎಡಿಟಿಂಗ್ ಹಾಗೂ ಟ್ಯಾಲಿ, ಜಿಎಸ್ಟಿ ಅಕೌಂಟಿಂಗ್ ಕ್ಷೇತ್ರಗಳಲ್ಲಿ ದಿನೇದಿನೇ ತಂತ್ರಜ್ಞಾನ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಯುವಜನರು ಅಪ್ಡೇಟ್ ಆಗಿರಬೇಕು ಎಂದು ಕಿವಿಮಾತು ಹೇಳಿದರು.
ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ರುಡ್ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್, “ಆರಂಭಿಕ ಬಂಡವಾಳವಿಲ್ಲ ಎಂಬ ಕಾರಣಕ್ಕೆ ಯಾರೂ ಉದ್ಯಮದ ಕನಸನ್ನು ಕೈಬಿಡಬೇಕಿಲ್ಲ. ಕೌಶಲ್ಯ ಮತ್ತು ಸ್ಪಷ್ಟ ಯೋಜನೆಯಿದ್ದರೆ ಬ್ಯಾಂಕ್ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವಂತ ಉದ್ಯಮ ಆರಂಭಿಸಬಹುದು. ಬ್ಯಾಂಕ್ ನೀಡುವ ಸಾಲವನ್ನು ಉತ್ಪಾದಕ ಕೆಲಸಗಳಿಗೆ ಬಳಸಿ, ಸಕಾಲದಲ್ಲಿ ಮರುಪಾವತಿಸುವ ಮೂಲಕ ನಂಬಿಕೆ ಉಳಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನದಲ್ಲಿ ಯುವಜನತೆಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, 1000ನೇ ಫೋಟೋಗ್ರಫಿ ತರಬೇತಿ ಪೂರ್ಣಗೊಂಡಿರುವುದು ಸಂಸ್ಥೆಯ ನಾಲ್ಕು ದಶಕಗಳ ಪಯಣದಲ್ಲಿ ಸುವರ್ಣ ಮೈಲಿಗಲ್ಲಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಅಧಿಕೃತ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸಂಸ್ಥೆಯ ನಿರ್ದೇಶಕ ಸುನೀಲ್ ಜಿ. ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ವಂದಿಸಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು.




