ಶನಿವಾರ, 24 ಅಕ್ಟೋಬರ್ 2026

ಬೆಳಗಾವಿಯಲ್ಲೇ RSS ಮುಖ್ಯಸ್ಥ ಮೋಹನ್ ಭಾಗವತ್ 9 ದಿನ ವಾಸ್ತವ್ಯ!!

ಬೆಳಗಾವಿಯಲ್ಲಿ ಜುಲೈ 10 ರಿಂದ 12 ರವರೆಗೆ ಆಯೋಜಿಸಲಾಗಿರುವ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಆಯೋಜಿಸಲಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಈ ಸಭೆಗೆ ಆಗಮಿಸಿದ್ದಾರೆ. 

ಹೈದರಾಬಾದ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರಿಗೆ ಸಂಘದ ಪ್ರಮುಖರು ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲದೆ ಇಂದಿನಿಂದ (ಜುಲೈ 6) ಒಂಬತ್ತು ದಿನಗಳ ಕಾಲ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. 

ಈ ಮಹತ್ವದ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಸೇರಿದಂತೆ ಸಂಘದ ಪ್ರಮುಖ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಇತರ ಪದಾಧಿಕಾರಿಗಳು ಕೂಡ ಈ ಸಮಾವೇಶದ ನೇತೃತ್ವ ವಹಿಸಲಿದ್ದಾರೆ. ಸಂಘದ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ಶಾಖೆಗಳ ವಿಸ್ತರಣೆ ಸೇರಿದಂತೆ ಹಲವು ಪ್ರಮುಖ ಸಾಂಸ್ಥಿಕ ವಿಚಾರಗಳ ಕುರಿತು ಈ ಸಭೆಯಲ್ಲಿ ಸುದೀರ್ಘ ಚರ್ಚೆಗಳು ನಡೆಯಲಿವೆ. 

ಸಭೆಯ ವಿವಿಧ ಅಧಿವೇಶನಗಳು ಅನಗೋಳದ ಸಂತ ಮೀರಾ ಶಾಲೆ, ಉದ್ಯಮಬಾಗ್ ಕೈಗಾರಿಕಾ ಪ್ರದೇಶದಲ್ಲಿರುವ ಫೌಂಡ್ರಿ ಕ್ಲಸ್ಟರ್ ಅತಿಥಿಗೃಹ ಹಾಗೂ ಗೂಡ್ಸ್‌ಶೆಡ್ ರಸ್ತೆಯ ಜಗನ್ನಾಥರಾವ್ ಜೋಶಿ ಸ್ಮಾರಕ ಭವನದಲ್ಲಿ ನಡೆಯಲಿವೆ. ಭಾಗವತ್ ಅವರ ಒಂಬತ್ತು ದಿನಗಳ ವಾಸ್ತವ್ಯದ ಅವಧಿಯಲ್ಲಿ ವಿವಿಧ ಹಂತದ ಸಂಘಟನಾ ಸಭೆಗಳು, ಪ್ರಮುಖರೊಂದಿಗೆ ಸಮಾಲೋಚನೆ, ಆಂತರಿಕ ಸಭೆಗಳು ಹಾಗೂ ಮಾರ್ಗದರ್ಶನ ಕಾರ್ಯಕ್ರಮಗಳು ನಡೆಯಲಿವೆ.

ರಾಷ್ಟ್ರೀಯ ನಾಯಕರ ಸುದೀರ್ಘ ವಾಸ್ತವ್ಯದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಗರದಾದ್ಯಂತ ಅತ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ (BNSS) ವಿಶೇಷ ಆದೇಶ ಹೊರಡಿಸಿದ್ದು, ಜುಲೈ 6 ರಿಂದ 14 ರವರೆಗೆ ಕಾರ್ಯಕ್ರಮ ನಡೆಯುವ ಮೂರೂ ಪ್ರಮುಖ ಸ್ಥಳಗಳ ಸುತ್ತಲಿನ 2 ಕಿಲೋಮೀಟರ್ ವ್ಯಾಪ್ತಿಯನ್ನು ರೆಡ್ ಜೋನ್ ಅಥವಾ ನೋ ಫ್ಲೈ ಜೋನ್ (No Fly Zone) ಎಂದು ಘೋಷಿಸಿದ್ದಾರೆ. ಈ ಅವಧಿಯಲ್ಲಿ ಯಾವುದೇ ರೀತಿಯ ಡ್ರೋನ್‌ಗಳು, ಮಾನವರಹಿತ ವೈಮಾನಿಕ ವಾಹನಗಳು (UAV) ಅಥವಾ ಪ್ಯಾರಾಗ್ಲೈಡರ್‌ಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.