ಭಾನುವಾರ, 25 ಅಕ್ಟೋಬರ್ 2026
Trending

ರಿಂಗ್ ರೋಡ್ ಶುಭಾ: ಪ್ರೀತಿ ಕೊಂದವಳಿಗೆ ವರಸೆ ತೋರಿಸಿದ ಕಾನೂನು

ಆಕೆಯ ಉಂಗುರದ ಬೆರಳಿಗೆ ಆತ ತೊಡಿಸಿದ ನಿಶ್ಚಿತಾರ್ಥದ ರಿಂಗ್ ಇನ್ನೂ ಸರಿಯಾಗಿ ಹೊಂದಿಕೊಂಡಿರಲಿಲ್ಲ. ಅಷ್ಟರಲ್ಲೇ ಭಾವೀ ಪತಿಯ ಜತೆ ಆಕೆ ರಿಂಗ್ ರೋಡಿಗೆ ಧಾವಿಸಿದ್ದಳು. ಅಲ್ಲಿ ಆತನಿಗಾಗಿ ಕಾಯುತ್ತಿದ್ದದ್ದು ಪ್ರೀತಿಯ ಮಾತುಗಳಲ್ಲ, ಅದು ಮರಣದ ಯೋಜನೆ.

Sponsored

ಅವಳು ರಿಂಗ್ ರೋಡ್ ಶುಭಾ! ಶುಭಾ ಅಂದರೆ ಯಾರಿಗೂ ಗೊತ್ತಾಗುವುದಿಲ್ಲ. ಶುಭ ಶಂಕರನಾರಾಯಣ್ ಅಂದರೂ ಅರ್ಥವಾಗಲಿಕ್ಕಿಲ್ಲ. ಆದರೆ ರಿಂಗ್ ರೋಡ್ ಶುಭ ಅನ್ನಿ. ಸರಕ್ಕನೆ ಯೋಚನೆಗಳು 2003ರ ದಿನಗಳಿಗೆ ಜಿಗಿಯುತ್ತವೆ. ಅಲ್ಲಿ ರಿಂಗ್ ರೋಡಿನಲ್ಲಿ, ಬನಶಂಕರಿಯ ನಂಬಿಕಸ್ಥ ಅಪ್ಪಟ ಬ್ರಾಹ್ಮಣರ ಮನೆಯ ಈ ಹುಡುಗಿ ಅದೇ ಬನಶಂಕರಿಯ ಇನ್ನೊಂದು ಮೂಲೆಯ ಕೆಲವೇ ಕಿಲೋಮೀಟರ್ ದೂರದ ಅಮಾಯಕ ಬ್ರಾಹ್ಮಣರ ಹುಡುಗನನ್ನು ಸುಪಾರಿ ಕೊಟ್ಟು ತೆಗೆಸಿದಳಲ್ಲ! ಆ ಕ್ರೌರ್ಯದ ಕಥೆಯನ್ನು ನೀವು ಮತ್ತೊಮ್ಮೆ ಕೇಳಲೇ ಬೇಕು. ಏಕೆಂದರೆ ದೇಶದಲ್ಲೇ ‘ಪ್ರೀತಿ’ಯ ಕೊಲೆಯ ಬಗ್ಗೆ ಒಂದು ವಿಶಿಷ್ಟ ಟ್ರೆಂಡನ್ನು ಸೃಷ್ಟಿಸಿದವಳು ಈ ರಿಂಗ್ ರೋಡ್ ಶುಭಾ!

ಹಳೇ ಹತ್ಯೆ ಕೇಸು, ಹೊಸ ಚರ್ಚೆ

ಮೊನ್ನೆ, 2026ರ ಅಕ್ಟೋಬರ್ 15ರಂದು ಶುಭಾ ಮತ್ತು ಅರುಣ್ ಮೇಲಿನ ಕೊಲೆ ಪ್ರಕರಣದ ಕ್ಷಮಾದಾನದ ಅರ್ಜಿ ಕರ್ನಾಟಕ ಸಚಿವ ಸಂಪುಟದ ಟೇಬಲ್ಲು ಮೇಲೆ ಬಂದು ಬಿದ್ದಿತ್ತು. ಅಲ್ಲಿ ಈ ಕೊಲೆ ಬಗ್ಗೆ ಚರ್ಚೆಗಳಾಗಿವೆ. ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿ ಎಂದು ಶುಭಾ ಅರುಣ್ ವರ್ಮಾ ಕೇಳಿಕೊಂಡಿದ್ದರು. ಆದರೆ ಕ್ಷಮೆಯ ಆರ್ಜಿ ತಿರಸ್ಕಾರವಾಗಿದೆ. ಅದಕ್ಕೆ ಮುಖ್ಯಕಾರಣ ಬೇರೆಯೇ ಇತ್ತು. ಕೊಲೆ ನಂತರದ ಈ 23 ವರ್ಷಗಳಲ್ಲಿ ಜೈಲಲ್ಲಿದ್ದದ್ದು ಕೇವಲ ಐದು ವರ್ಷ. ಉಳಿದ ಸಮಯ ಈ ಜೋಡಿ ಜಾಮೀನು ಪೆರೋಲ್ ಅಂತ ಜೈಲಿನ ಹೊರಗೇ ಇದ್ದು ಎಲ್ಲರಂತೆ ಸಾಮಾನ್ಯ ಜೀವನ ನಡೆಸಿತ್ತು ಎಂಬುದನ್ನು ಸಂಪುಟ ಗಮನಿಸಿತ್ತು.

ರಿಂಗ್ ರೋಡ್ ಶುಭಾ

ಅದು ನಿಶ್ಚಿತಾರ್ಥ ನಡೆದ ಕೇವಲ ನಾಲ್ಕು ದಿನಗಳಲ್ಲಿ ನಡೆದ ಹತ್ಯೆ. ಇವತ್ತಿಗೆ, 21ನೆಯ ಶತಮಾನದ ಕಾಲು ಭಾಗ ಆಯುಷ್ಯ ಮುಗಿದ ಹೋಗಿದೆ. ಈಗ ಗಂಡನನ್ನು ಕೊಲ್ಲುವುದು, ಕೊಲ್ಲಿಸುವುದು, ಭಾವಿ ಪತಿಯನ್ನು ನರಕಕ್ಕೆ ದೂಡುವುದು, ಹನಿಮೂನಿನಲ್ಲಿ ಪತಿಯನ್ನು ಕೊರಕಲಿಗೆ ತಳ್ಳುವುದು ಇತ್ಯಾದಿಗಳು ಮಾಮೂಲಾಗಿದೆ. ಆದರೆ ಕಾಲು ಶತಮಾನದ ಹಿಂದೆಯೇ, ಇಂತಹದೊಂದು ‘ಮ್ಯಾರೇಜ್ ಮರ್ಡರ್’ ಗೆ ಇಳಿದಿದ್ದವಳು ಈ ಶುಭಾ!

ಅವಳು ಎರಡನೆಯ ವರ್ಷದ ಎಲ್ ಎಲ್ ಬಿ ಓದುತ್ತಿದ್ದ ಹುಡುಗಿ. ಮನೆಯಲ್ಲಿ ಅಪ್ಪ ಅಮ್ಮ ಮದುವೆಯಾಗಲು ಒತ್ತಾಯಿಸುತ್ತಾರೆ. ಒತ್ತಾಯಿಸುವುದು ಮಾತ್ರವಲ್ಲ, ಒಂದು ಅನುರೂಪ ಹುಡುಗನನ್ನು ಆಯ್ಕೆ ಮಾಡಿ ಮದುವೆಗೆ ತಯಾರಿ ನಡೆಸುತ್ತಾರೆ. ಆತ ಹಿಂದಿನಿಂದಲೂ ಕುಟುಂಬಕ್ಕೆ ಪರಿಚಿತ ಹುಡುಗನೇ. ಆತ ಇಂಟೆಲ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ, ತುಂಬಾ ಬುದ್ಧಿವಂತ, ಅಷ್ಟೇ ಪಾಪದ ಹುಡುಗ. ಆತನಿಗೂ ಶುಭಾಗೂ 2003ರ ನವೆಂಬರ್ 30ರಂದು ಇಬ್ಬರ ನಿಶ್ಚಿತಾರ್ಥ ಕೂಡಾ ನಡೆದಿತ್ತು.

ಉಂಗುರ ಬದಲಿಸಿಕೊಂಡು ನಾಲ್ಕು ದಿನ ಕಳೆದಿತ್ತಷ್ಟೇ. 2003ರ ಡಿಸೆಂಬರ್ 3ರ ಸಂಜೆ ಸತ್ತು ರಾತ್ರಿಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಒಂದಷ್ಟು ಜೋರಾಗಿಯೇ ಚಳಿ ಇಳಿದಿತ್ತು. ಅಂದು ರಾತ್ರಿ ನವ ಜೋಡಿ ಹೊರಗಡೆ ಊಟಕ್ಕೆ ಹೋಗಿದ್ದರು. ಒಳ್ಳೆಯ ಊಟ ಮುಗಿಸಿ ಭಾವೀ ಪತ್ನಿಯ ಕಿರುಬೆರಳು ಲಾಕ್ ಮಾಡಿಕೊಂಡು ಹೆಗಲಿಗೆ ಹೆಗಲು ಒರೆಸುತ್ತಾ ನಡೆಯುವ ರಾತ್ರಿಯ ಹೊತ್ತದು. ಚಳಿಯ ಸಂಗಡ ಮನಸ್ಸು ಬೆಚ್ಚಗಾಗಿ ಖುಷಿ ಮೂಡಿದ್ದ ಸಂದರ್ಭ. ಊಟವಾದ ತಕ್ಷಣ ಶುಭಾ, ‘ನನಗೆ ವಿಮಾನ ನೋಡಬೇಕು’ ಅನ್ನುತ್ತಾಳೆ. ಇನ್ನೂ ಮದುವೆಯಾಗದ ಜೋಡಿ. ‘ಒಂದಷ್ಟು ನನ್ನ ಸುತ್ತಿಸಿ’ ಎಂದು ಸುತ್ತಿ ಬಳಸಿ ಹುಡುಗಿ ಹೇಳಿದರೆ ಹುಡುಗನಿಗೆ ಅದು ಖುಷಿಯ ಕ್ಷಣಗಳೇ ತಾನೇ? ಹಾಗೆ ಗಿರೀಶ್ ಮತ್ತು ಶುಭಾ ಇಂದಿರಾನಗರ ಬಳಿಯ ಹೆಚ್‌ಎಎಲ್ ರಿಂಗ್ ರೋಡ್‌ ಕಡೆಗೆ ತಿರುಗುತ್ತಾರೆ. ಅಲ್ಲಿ ಅವರು ಬೈಕ್ ಪಾರ್ಕ್ ಮಾಡಿ ರಿಂಗ್ ರೋಡ್‌ನಲ್ಲಿ ಇಳಿಯುತ್ತಾರೆ. ಅಲ್ಲಿಂದ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ವಿಮಾನ ಕಂಡು ಆಕೆ ಅಚ್ಚರಿಯಿಂದ ಕಣ್ಣರಳಿಸುತ್ತಾಳೆ. ಅವಳ ಮುಖದ ಮೃದುತ್ವವನ್ನೇ ಗಮನಿಸುತ್ತಾ ಆತ ಬೆರಗಿನಿಂದ ಆಕೆಯ ಕಡೆ ಸರಿದಾಗ ಬಲವಾದ ಏಟು ಗಿರೀಶ್ ತಲೆಯ ಮೇಲೆ ಅಪ್ಪಳಿಸುತ್ತದೆ. ಯಾರೋ ಆಗಂತುಕರು ಬೈಕಿನ ಸೈಲೆನ್ಸರ್ ಪೈಪ್ ಹಿಡಿದು ನೇರ ತಲೆಯ ಮೇಲೆ ಹೊಡೆದಿದ್ದರು. ತಲೆಯ ತೀವ್ರ ಗಾಯಗಳಿಂದ ಮಾರನೆಯ ದಿನ ಅಸ್ಪತ್ರೆಯಲ್ಲಿ ಗಿರೀಶ್ ಮರಣ ಹೊಂದುತ್ತಾನೆ. ಅಲ್ಲಿ ಹೊಡೆದ ಜಾಗದಲ್ಲೇ ಮರುದಿನ ಬೈಕ್ ಸೈಲೆನ್ಸರ್ ಸಿಕ್ಕಿತ್ತು. ಸದ್ದನ್ನು ಅಡಗಿಸುವ ಸೈಲೆನ್ಸರ್ ಮುಂದೆ ಸಾಕ್ಷ್ಯವಾಗಿ ಮಾತಾಡಿದುದೇ ಈ ಕೇಸಿನ ವಿಶೇಷತೆ!

ಮೇಲು ನೋಟಕ್ಕೆ ಇದು ಕೊಲೆ ಎಂದು ಪೊಲೀಸರಿಗೆ ಅನ್ನಿಸಿಬಿಟ್ಟಿತ್ತು. ಸೈಲೆನ್ಸರ್ ನಿಂದ ಹೊಡೆದು ದರೋಡೆ ಮಾಡಲು ಪ್ರಯತ್ನಿಸಿದರು ಎಂದು ಶುಭಾ ಹೇಳುತ್ತಾಳೆ. ಅಲ್ಲಿ ಸೈಲೆನ್ಸರ್ ಸಿಕ್ಕಿದೆ ಅಂದ ಕೂಡಲೇ ಯಾರೋ ಅದನ್ನು ಹೊರಗಿನಿಂದ ತಂದಿರಬೇಕು ಎಂದು ಪೊಲೀಸರು ಊಹಿಸುತ್ತಾರೆ. ಹೊರಗಿನಿಂದ ತಂದರು ಅಂದರೆ, ಇದು ಪೂರ್ವಯೋಜಿತ ಕೆಲಸವೇ ಇರಬೇಕು ಅನ್ನೋದು ಪೊಲೀಸರ ಪಾಯಿಂಟ್. ಹಾಗಾಗಿ ಆ ದಿಕ್ಕಿನಲ್ಲಿ ತನಿಖೆಯ ದಿಕ್ಕು ಹರಿಯುತ್ತದೆ.

ತನಿಖೆ ಕೈಗೊಂಡ ಪೊಲೀಸರು ಮೊದಲಿಗೆ, ಎಲ್ಲಾ ಕೊಲೆ ಕೇಸಿನ ತನಿಖೆಗಳಲ್ಲಿ ಮಾಡುವಂತೆ ‘ಫನೆಲಿಂಗ್ ಎಫೆಕ್ಟ್” ಹುಡುಕಾಟ ಶುರು ಮಾಡಿದರು. ಅಂದರೆ, ಮೊದಲ – ಅತ್ಯಗತ್ಯ ಅನುಮಾನಗಳನ್ನು ಮೊದಲಿಗೆ ಬಗೆಹರಿಸಿಕೊಳ್ಳುವ ಕೆಲಸವಿದು. ಪೊಲೀಸರು ಗಿರೀಶ್ ಮೇಲೆ ಯಾರಿಗೆ ವೈರತ್ವ ಇತ್ತು ಅನ್ನುವ ಪತ್ತೆದಾರಿಕೆಗೆ ಇಳಿದರು. ಪಾಪದ ಹುಡುಗ ಗಿರೀಶ್ ಗೆ ಯಾರದೇ ವೈರತ್ವ ಇರೋದು ಕಂಡುಬರಲಿಲ್ಲ. ಆಗ ಕೊಲೆ ಸಂದರ್ಭ ಕೊನೆಯದಾಗಿ ಗಿರೀಶ್ ನನ್ನು ಭೇಟಿಯಾದ ವ್ಯಕ್ತಿಯ ಕಡೆ ಪೊಲೀಸರ ಗಮನ ಹರಿಯುತ್ತದೆ. ಆತನ ಭಾವಿ ಪತ್ನಿ ಶುಭಾ ಕೊಲೆ ಸಂದರ್ಭ ಆತನ ಜತೆಗಿದ್ದವಳು. ಅವತ್ತು ಆಘಾತದಿಂದ ಶುಭಾ ಕಣ್ಣನ್ನು ದುಃಖದ ಮಡುವಾಗಿಸಿಕೊಂಡು ಮೌನಕ್ಕೆ ಜಾರಿದ್ದಳು. ಯಾರಿಗೂ ಯಾರ ಮೇಲೂ ಅನುಮಾನ ಬರುವಂತೆಯೇ ಇರಲಿಲ್ಲ.

ಆದರೆ ಪೊಲೀಸರು ಇನ್ವೆಸ್ಟಿಗೇಷನ್ ಪ್ರೋಟೋಕಾಲ್ ನಡೆಸಲೇಬೇಕಲ್ಲ? ಪೊಲೀಸ್ ಇಲಾಖೆಯಲ್ಲಿ ಎಷ್ಟೋ ಒಳ್ಳೆಯ ಅಧಿಕಾರಿಗಳಿದ್ದಾರೆ. ಇಂತಹಾ ಒಂದು ಕೇಸು ಸಿಕ್ಕಿದರೆ ಸಾಕು, ಆಳಕ್ಕೆ ಇಳಿದು ತನಿಖೆ ಪ್ರತಿ ಕೋನದಿಂದಲೂ ತನಿಖೆ ನಡೆಸಿ ಬಿಡುತ್ತಾರೆ. ಹಾಗಾಗಿ ಪೊಲೀಸರು ಹಲವು ತಂಡಗಳಲ್ಲಿ ಕೆಲಸ ಶುರು ಮಾಡಿದರು. ಕೆಲ ಪೊಲೀಸರು ಶುಭಾ ಮತ್ತು ಗಿರೀಶ್ ಎಂಗೇಜ್ಮೆಂಟ್ ಸೀಡಿ ಪಡೆದುಕೊಂಡು ವೀಡಿಯೋ ವೀಕ್ಷಣೆಗೆ ಕೂತರು. ಮತ್ತೆ ಮತ್ತೆ ರಿವೈಂಡ್ ಮಾಡಿ ನೋಡಿದರು. ಖುಷಿ ಇರಬೇಕಾದ ಜಾಗದಲ್ಲಿ ಅವರಿಗೆ ಕಂಡಿತ್ತು ಸಿಡುಕು! ಮುಗ್ಧ ಶುಭ್ರ ಮುಖದ ಹುಡುಗಿ ಶುಭಾಳ ಒಳಗಡೆ ಮುಖವಾಡ ಇದ್ದೀತಾ ಎಂದು ಪೊಲೀಸರು ಹುಡುಕಿದರು.

ತನಿಖೆಗೆ ಸಹಾಯ ಮಾಡಿದ ಫೋನ್

ಅಲ್ಲಿ ಮೊಬೈಲ್ ಫೋನ್ ಒಂದರಿಂದ ಬಿಚ್ಚಿಕೊಂಡಿತ್ತು ಇಡೀ ಹತ್ಯೆಯ ಕುರಿತ ಮಾಹಿತಿಗಳು. ಆಗ ಕಥೆಯಲ್ಲಿ ಅರುಣ್ ವರ್ಮಾ ಎಂಬಾತ ನಡೆದು ಬಂದ. ಶುಭಾ ಓದುತ್ತಿದ್ದ ಕಾನೂನು ಕಾಲೇಜಿನಲ್ಲಿ ಆತನೂ ಓದುತ್ತಿದ್ದ. ಅತ ಶುಭಾಳ ಜೂನಿಯರ್ ಅಂತ ಗೊತ್ತಾಯಿತು. ಇಲ್ಲಿಂದ ದಿಕ್ಕು ಬದಲಾಗಿ ತನಿಖೆ ವೇಗ ಪಡೆದುಕೊಂಡಿತು.

ಅರುಣ್ ವರ್ಮಾಳೊಂದಿಗೆ ಪ್ರೀತಿಯ ಸಂಬಂಧವಿತ್ತು ಅನ್ನೋದು ಪೋಲೀಸರಿಗೆ ಗೊತ್ತಾಗುತ್ತದೆ. ಶುಭಾಳ ತಂದೆ ಅವಳ ಈ ಸಂಬಂಧವನ್ನು ಒಪ್ಪಿರಲಿಲ್ಲ; ಗಿರೀಶ್ ಜತೆ ನಿಶ್ಚಿತಾರ್ಥ ಕೂಡ ಮಾಡಿಬಿಟ್ಟಿದ್ದರು. ಹಾಗಾಗಿ ಪೊಲೀಸರ ಅನುಮಾನ ಶುಭಾ ಮತ್ತು ಅರುಣ್ ವರ್ಮಾನನ್ನು ಬೆನ್ನಟ್ಟುತ್ತದೆ. ಎಲ್ಲದಕ್ಕೂ ಕಾರಣವಾದದ್ದು ಅವರಿಬ್ಬರ ಮೊಬೈಲ್ ಫೋನ್ ಗಳು.

ಕೊಲೆಗೂ 2003 ಇಸವಿಗೂ ಮೊಬೈಲಿಗೂ ನಂಟು

ಕೊಲೆ ನಡೆದ 2003ರ ಇಸವಿ ಮೊಬೈಲ್ ಫೋನ್ ಗೂ ನಿಕಟ ಸಂಬಂಧ ಕಲ್ಪಿಸಿದ ಒಂದು ಮಹತ್ವದ ವರ್ಷ. 2003ದ ಇಸವಿ ಇನ್ ಕಮ್ಮಿಂಗ್ ಕರೆಗಳಿಗೂ ದುಡ್ಡು ತೆರಬೇಕಾದ ನಿಯಮ ಸತ್ತು ಹೋದ ವರ್ಷ. ಐಷಾರಾಮಿ ಎನಿಸಿಕೊಂಡಿದ್ದ ಮೊಬೈಲ್ ಅಗತ್ಯ ವಸ್ತುವಾಗುವತ್ತ ಹೆಜ್ಜೆ ಹಾಕಿತ್ತು. ಬೆಂಗಳೂರಿನಲ್ಲಿ ಹೆಚ್ಚೆಚ್ಚು ಜನರು ಮೊಬೈಲ್ ಬಳಕೆ ಶುರು ಮಾಡಿದ್ದರು. ಅಂಥವರಲ್ಲಿ ಈ ಜೋಡಿ ಕೂಡ ಸೇರಿತ್ತು.

ಹಾಗೆ ಆಸೆಯಿಂದ, ಪ್ರೀತಿಯಿಂದ ಶುಭಾ- ಅರುಣ್ ವರ್ಮಾ ಚಾಟ್ ಮಾಡಿಕೊಂಡಿದ್ದರು. ತಮ್ಮ ಪ್ರೀತಿ ವೃದ್ಧಿಸಲು ಬಳಕೆಯಾದ ಇದೇ ಫೋನ್ ಮುಂದೊಂದು ದಿನ ತಮ್ಮನ್ನು ಜೀವಾವಧಿ ಶಿಕ್ಷೆಯ ತಂದು ನಿಲ್ಲಿಸಬಹುದು ಅನ್ನುವ ಸಣ್ಣ ಕಲ್ಪನೆ ಕೂಡ ಅವರಲ್ಲಿರಲಿಲ್ಲ. ಅಪರಾಧ ಪತ್ತೆಗೆ ಮೊಬೈಲ್ ಸಹಾಯ ಮಾಡೀತು ಅನ್ನೋ ಯೋಚನೆ ಆಗ ಹೆಚ್ಚಿನವರಿಗೆ ಇರಲಿಲ್ಲ.

ಅಂದು ಆಕೆಯ ಮೊಬೈಲ್ ಟ್ರಾಕ್ ಪಡೆದುಕೊಂಡ ಪೊಲೀಸರಿಗೆ ಸಿಕ್ಕಿತ್ತು, ಪೇಜುಗಟ್ಟಲೆ ಕಾಲ್ ಲಿಸ್ಟ್. ಕೊಲೆಯ ದಿನ ಆಕೆ ಅರುಣನೊಂದಿಗೆ 73 ಬಾರಿ ಕರೆ ಮಾಡಿದ್ದಳು. ಅವರಿಬ್ಬರ ಮಧ್ಯೆ ಹಲವಾರು ಸಂದೇಶಗಳ ಅತ್ತಿತ್ತ ಹರಿದಾಡಿತ್ತು. ವಿಚಾರಣೆ ಶುರುಮಾಡಿದ ಪೊಲೀಸರಿಗೆ, ‘ನಾನು ಬೆಂಗಳೂರಿನಲ್ಲಿ ಇರಲೇ ಇಲ್ಲ ಎಂದು ಬಿಟ್ಟ ಅರುಣ್’. ಆದರೆ ಆತನ ಮೊಬೈಲ್ ಲೊಕೇಶನ್ ಅಪರಾಧ ಸ್ಥಳದ ಹತ್ತಿರವೇ ಸುಳಿಯುತ್ತಿತ್ತು. ಇದು ಪೊಲೀಸರ ಅನುಮಾನವನ್ನು ಬಲಪಡಿಸಿತು.

ಸಾಕ್ಷ್ಯ ಮತ್ತು ಶಿಕ್ಷೆ

ಅವರಿಬ್ಬರ ಕರೆ ದಾಖಲೆಗಳು, ಸಾಂದರ್ಭಿಕ ಸಾಕ್ಷಿಗಳು ಬಲವಾದ ಸಾಕ್ಷ್ಯಗಳನ್ನು ನಿರ್ಮಿಸಿದವು. ಜತೆಗೆ, ನಿಶ್ಚಿತಾರ್ಥಕ್ಕೂ ಮೊದಲೇ ಗಿರೀಶ್‌ನನ್ನು ಕೊಲ್ಲಲು ವಿಫಲ ಯತ್ನಗಳು ನಡೆದಿದ್ದವು ಎಂದೂ ಪೊಲೀಸರ ತನಿಖೆ ಪತ್ತೆ ಮಾಡಿತ್ತು. ಅವೆಲ್ಲವೂ ಇದೊಂದು ಪೂರ್ವನಿಯೋಜಿತ ಮ್ಯಾರೇಜ್ ಮರ್ಡರ್ ಎಂಬುದನ್ನು ದೃಢಪಡಿಸಿದವು. ಸಾಕಷ್ಟು ಸಾಕ್ಷ್ಯಾಧಾರ ಕೈ ಸೇರಿದ ಬೆನ್ನಲ್ಲೇ ಸೈಲೆನ್ಸರ್ ಬೀಸಿದ್ದ ವೆಂಕಟೇಶ್, ದಿನಕರ್ ಜತೆ ಶುಭಾ ಮತ್ತು ಅರುಣ್ ಅರೆಸ್ಟ್ ಆದರು.

ಕೇವಲ ಒಂದು ಮೊಬೈಲ್ ಆಸೆಗಾಗಿ ಹತ್ಯಾರ ಹಿಡಿದವನು

ಅರುಣ್ ವರ್ಮಾ ದಿನಕರನಿಗೆ ಹಣ ನೀಡಿ ಹೊಸ ವ್ಯವಹಾರ ಆರಂಭಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ. ಈ ದಿನಕರ ಅರುಣ್ ವರ್ಮಾನಿಗೆ ಸಂಬಂಧದಲ್ಲಿ ಸೋದರನಾಗಬೇಕು. ಹೊಸ ವ್ಯವಹಾರಕ್ಕೆ ದುಡ್ಡು ಸಿಗುವ ಆಸೆಯಿಂದ ದಿನಕರ್ ಈ ಕೊಲೆಯಲ್ಲಿ ಪಾತ್ರವಾಗಲು ಒಪ್ಪಿಕೊಳ್ಳುತ್ತಾನೆ. ಆಗ ಅವನು ಭೇಟಿಯಾಗುವುದು ಸ್ಥಳೀಯ ಕ್ರಿಮಿನಲ್ ವೆಂಕಟೇಶ್‌ ಎಂಬವನನ್ನು. ಈ ಪ್ರಕರಣದ ವಿಚಿತ್ರ ಅಂದರೆ ಒಂದು ಮೊಬೈಲ್ ಫೋನಿಗಾಗಿ ಕೊಲೆಯಾದದ್ದು, ಮತ್ತು ಈ ಮೊದಲೇ ಹೇಳಿದಂತೆ ಮೊಬೈಲ್ ಫೋನಿನಿಂದಲೇ ಅಪರಾಧಿಗಳು ಸಿಕ್ಕಿಬಿದ್ದದ್ದು!! ಅಂದುಕೊಂಡ ಕಾರ್ಯ ಯಶಸ್ವಿಯಾದರೆ, ಶ್ರೀಮಂತರ ಕೈಯಲ್ಲಿ ಮಾತ್ರ ಕಾಣಸಿಗುತ್ತಿದ್ದ ಮೊಬೈಲ್ ಫೋನನ್ನು ನೀಡುವುದಾಗಿ ಆಮಿಷ ಒಡ್ಡಲಾಗಿತ್ತು. ಇನ್ನೊಂದು ಆರು ತಿಂಗಳು ಕಾದಿದ್ದರೆ ಮೊಬೈಲ್ ಫೋನ್ ಇನ್ನಷ್ಟು ಅಗ್ಗವಾಗಿ ಆತನ ಕೈಗೂ ಬರುತ್ತಿತ್ತು. ಕಾಯಕಾಗದ ಕ್ರಿಮಿನಲ್ ಹಿನ್ನೆಲೆಯ ವೆಂಕಟೇಶ್ ದುರಾಸೆಯ ಬೋನಿನೊಳಗೆ ಸಿಕ್ಕಿಬಿದ್ದ!

ಮುಂದಕ್ಕೆ ಸುದೀರ್ಘ ವಿಚಾರಣೆ ನಡೆದು, 2010ರ ಜುಲೈನಲ್ಲಿ ಟ್ರಯಲ್ ಕೋರ್ಟ್ ಶುಭಾ, ಅರುಣ್, ವೆಂಕಟೇಶ್ ಮತ್ತು ದಿನಕರ್ ಗೆ ಜೀವಾವಧಿ ಶಿಕ್ಷೆ ವಿಧಿಸಿತು. ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದರೂ, 2025ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ನಾಲ್ವರ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿಯಿತು. ಇತ್ತೀಚೆಗೆ ಶುಭಾ- ಅರುಣ್ ವರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗಳನ್ನು ಕರ್ನಾಟಕ ಸಚಿವ ಸಂಪುಟ ತಿರಸ್ಕರಿಸಿದೆ. ನಂಬಿಕೆ ದ್ರೋಹ ಮೂಲಕ ‘ಮ್ಯಾರೇಜ್ ಕಿಲ್ಲಿಂಗ್’ ಟ್ರೆಂಡ್ ಸೃಷ್ಟಿಸಿದ ರಿಂಗ್ ರೋಡ್ ಶುಭಾ ಮತ್ತು ತಂಡ ಕತ್ತಲ ಕಂಬಿಯಾಚೆಗೆ ನಿಂತಿದ್ದಾರೆ. ವೈಯಕ್ತಿಕ ದ್ವೇಷಕ್ಕೆ ಒಂದಷ್ಟು ರಿಯಾಯಿತಿ ಸಿಗುತ್ತೇನೋ, ಆದರೆ ಪ್ರೀತಿಯಿಂದ ನಂಬಿ ಬರುವ ಅಮಾಯಕರ ಹತ್ಯೆಗೆ ವಿನಾಯಿತಿ ಇಲ್ಲ ಎಂದು ಕಾನೂನು ತನ್ನದೇ ಶೈಲಿಯಲ್ಲಿ ಉತ್ತರಿಸಿದೆ.

ಈ ಪ್ರಕರಣ “ರಿಂಗ್ ರೋಡ್ ಶುಭಾ ಕೇಸ್” ಎಂದೇ ಜನಪ್ರಿಯವಾಯಿತು. ಈ ಘಟನೆಯನ್ನು ಆಧರಿಸಿ 2015ರ ಕನ್ನಡ ಚಲನಚಿತ್ರ “ರಿಂಗ್ ರೋಡ್” ನಿರ್ಮಾಣವಾಗಿತ್ತು; ಇದನ್ನು ಪ್ರಿಯಾ ಬೆಳ್ಳಿಯಪ್ಪ ನಿರ್ದೇಶಿಸಿದ್ದರು.