ಪುತ್ತೂರು: ಆನಡ್ಕ ಕಡೆಯಿಂದ ಪಡೀಲ್ ಕಡೆಗೆ ಯಾವುದೇ ಪರವಾನಗಿ ಇಲ್ಲದೆ ಮೂರು ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಪುತ್ತೂರು ನಗರ ಠಾಣೆ ಪೊಲೀಸರು ಪಿಕಪ್ ವಾಹನ ಸಹಿತ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಆ.23 ರ ಬೆಳಿಗ್ಗೆ ಆನಡ್ಕ ಕಡೆಯಿಂದ ಪಡೀಲ್ ಕಡೆಗೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿಯ ಮೇರೆಗೆ ಪುತ್ತೂರು ನಗರ ಠಾಣೆಯ ಪೊಲೀಸರು ಸಿಬ್ಬಂದಿಯೊಂದಿಗೆ ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಬಳಿ ವಾಹನ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಪಿಕಪ್ ವಾಹನವನ್ನು ತಡೆದು ಪರಿಶೀಲನೆ ಮಾಡಿದಾಗ, ಮೂರು ಜಾನುವಾರುಗಳನ್ನು ಕಟ್ಟಿ ಹಾಕಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ ಚಾಲಕ ಮಹಮ್ಮದ್ ಜಬ್ಬಾರ್ನನ್ನು ವಿಚಾರಣೆ ಮಾಡಿದಾಗ, ಶಾಂತಿಗೋಡು ಗ್ರಾಮದ ನಿವಾಸಿ ಅಶೋಕ್ ಎಂಬುವವರಿಂದ ಜಾನುವಾರುಗಳನ್ನು ಖರೀದಿ ಮಾಡಿದ್ದು, ಯಾವುದೇ ಪರವಾನಗಿ ಪಡೆಯದೆ ವಧೆ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿರುವ ಕುರಿತು ವರದಿಯಾಗಿದೆ.
ಈ ಕುರಿತು ಜಾನುವಾರುಗಳು, ಪಿಕಪ್ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿ ಮಹಮ್ಮದ್ ಜಬ್ಬಾರ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.



