ಚಿಕ್ಕಮಗಳೂರು,ಆ.23: ದೈವಾರಾಧನೆ ಹಾಗೂ ವಶೀಕರಣದ ಹೆಸರಿನಲ್ಲಿ ಯುವತಿಯೋರ್ವಳಿಗೆ ಚಿತ್ರಹಿಂಸೆ ನೀಡಿದ ಗಂಭೀರ ಆರೋಪದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.
ಸತೀಶ್ ಪಾತ್ರಿ (ಆರೋಪಿ) ಎಂಬಾತ ದೇವಾಲಯ ನಿರ್ಮಿಸಿದ್ದು, ಪ್ರೇತ, ಭೂತ ಬಿಡಿಸುವ ನೆಪದಲ್ಲಿ ಯುವತಿಯೋರ್ವಳಿಗೆ ಕಿರುಕುಳ ನೀಡಿರುವ ವಿಡಿಯೋ ಮತ್ತು ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಸತೀಶ್ ಪಾತ್ರಿ ಯುವತಿಯನ್ನು ಬಲವಂತವಾಗಿ ಹಿಡಿದು ಹೆದರಿಸುವುದು ಕಂಡು ಬಂದಿದೆ. ಕೋಳಿ ನೀಡಿ ರಕ್ತ ಕುಡಿಯಲು ಒತ್ತಾಯ ಮಾಡುವುದು, ರಕ್ತಾಹಾರ ಸ್ವೀಕರಿಸದಿದ್ದರೆ ಉರಿಯುವ ಕರ್ಪೂರ ಇಡುವುದಾಗಿ ಬೆದರಿಸುವುದು, ಬಾಳೆ ಎಲೆಯ ಮೇಲಿಟ್ಟ ಅವಲಕ್ಕಿಯನ್ನು ಸಂಪೂರ್ಣವಾಗಿ ತಿನ್ನಲು ವಾರ್ನಿಂಗ್ ನೀಡುವುದು ದೃಶ್ಯದಲ್ಲಿದೆ.
ಇದರೊಂದಿಗೆ ಮಹಿಳೆಯೊಬ್ಬರ ಜೊತೆ ಅಸ ಭ್ಯವಾಗಿ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಕರಾವಳಿ ಭಾಗದ ಆಚರಣೆಯನ್ನು ಬಂಡವಾಳ ಮಾಡಿಕೊಂಡ ಈತ ವಂಚನೆ ಮಾಡುತ್ತಿರುವುದಾಗಿ ಗ್ರಾಮಸ್ಥರ ಹಾಗೂ ತಮ್ಮಣ್ಣಶೆಟ್ಟಿ ಅವರ ಆರೋಪ. ಈ ಕುರಿತು ಕಠಿಣ ಕ್ರಮಕ್ಕೆ ಆಗ್ರಹ ಮಾಡಿ ಎನ್.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದು ಮೂರು ವರ್ಷದ ಹಳೆಯ ವಿಡಿಯೋ. ನಾನು ಒಂದೂವರೆ ವರ್ಷದಿಂದ ದರ್ಶನ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಹಳೆಯ ಧರ್ಮದರ್ಶಿಯೇ ಈ ಕುರಿತು ಪಿತೂರಿ ನಡೆಸಿ, ತೇಜೋವಧೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಮುಂದೆ ಬಂದು ಸತೀಶ್ ಪಾತ್ರಿ ಹೇಳಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.



