ದಕ್ಷಿಣ ಕನ್ನಡದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಮ್ನಿ ಕಾರು ಕದ್ದು ಆಂಬುಲೆನ್ಸ್ ಆಗಿ ಬದಲಾಯಿಸಿದ 4 ಮಂದಿ ಅಂತರಾಜ್ಯ ಕಳ್ಳರನ್ನು ಭರ್ಜರಿ ಕಾರ್ಯಾಚರಣೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Sponsoredಕೇರಳದ ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ. (25), ಮೊಹಮ್ಮದ್ ಆಸೀಕ್ (25), ಮೊಹಮ್ಮದ್ ಸಿರಾಜ್ (28) ಹಾಗೂ ತಮಿಳುನಾಡಿನ ಕರೂರು ನಿವಾಸಿ ಶಕ್ತಿವೇಲು ಜಿ. (24) ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ
ಕಳೆದ ಜೂನ್ 19 ಮತ್ತು 20ರ ಮಧ್ಯರಾತ್ರಿ ಮಾಡ್ನೂರು ಕಾವು ಎಂಬಲ್ಲಿ ಸಾರ್ವಜನಿಕರ ಓಮ್ನಿ ಕಾರೊಂದು ಕಳ್ಳತನವಾಗಿತ್ತು. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು (ಅ.ಕ್ರ: 94/2026). ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.
ಕದ್ದ ಕಾರು ಆಂಬ್ಯುಲೆನ್ಸ್ಗೆ ಮಾರ್ಪಾಟು!
ಬಂಧಿತರಿಂದ 2.5 ಲಕ್ಷ ರೂ. ಮೌಲ್ಯದ ಕಳುವಾಗಿದ್ದ ಓಮ್ನಿ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ 1 ಲಕ್ಷ ರೂ. ಮೌಲ್ಯದ ಕೆಟಿಎಂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪುತ್ತೂರಿನಲ್ಲಿ ಕಾರು ಕದ್ದು ಮೊದಲು ಕೇರಳಕ್ಕೆ ಸಾಗಿಸಿ, ಬಳಿಕ ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು. ಪೊಲೀಸರ ಕಣ್ಣಿಗೆ ಮಣ್ಣೆರಚಲು ತಮಿಳುನಾಡಿನಲ್ಲಿ ಆ ಕಾರನ್ನು ‘ಆಂಬ್ಯುಲೆನ್ಸ್’ ಆಗಿ ಪರಿವರ್ತಿಸಿ ಬಳಸುತಿದ್ದುದು ತನಿಖೆಯಲ್ಲಿ ಬಯಲಾಗಿದೆ.




