ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ ನಡೆಯುತ್ತೆ ಎಂದು ರೌಡಿಶೀಟರ್‌ವೊಬ್ಬ ಮಾಡಿರುವ ಗಂಭೀರ ಆರೋಪಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜೈಲು ಹಾಗೂ ಪೊಲೀಸ್ ಇಲಾಖೆ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
Sponsoredತುಮಕೂರು ಮೂಲದ ರೌಡಿಶೀಟರ್ ಸುರೇಶ್ ಅಲಿಯಾಸ್ ಸಾಯಿ ಕುಮಾರ್ ಎಂಬಾತ ಹಿಂಡಲಗಾ ಜೈಲಿನಲ್ಲಿದ್ದ ವೇಳೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ ಎನ್ನಲಾಗಿದೆ. ಜೈಲಿನೊಳಗೆ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆತ ಆರೋಪಿಸಿದ್ದು, ವಿಡಿಯೋದಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾನೆ.
ಹಣ ನೀಡಿದರೆ ಜೈಲಿನೊಳಗೆ ಕೈದಿಗಳಿಗೆ ಮೊಬೈಲ್ ಫೋನ್ ಹಾಗೂ ಮದ್ಯ ಸಿಗುತ್ತದೆ ಎಂದು ಸುರೇಶ್ ಆರೋಪಿಸಿದ್ದಾನೆ. ಸಿಬ್ಬಂದಿಗೆ ಲಂಚ ನೀಡಿದರೆ ಜೈಲಿನ ನಿಯಮಗಳನ್ನು ಉಲ್ಲಂಘಿಸಿ ಹಲವು ಅಕ್ರಮ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗುತ್ತದೆ ಎಂಬ ಆರೋಪವನ್ನೂ ಮಾಡಿದ್ದಾನೆ.
ಇಷ್ಟೇ ಅಲ್ಲದೆ, ಜೈಲಿನೊಳಗೆ ನಡೆಯುತ್ತಿದೆ ಎನ್ನಲಾದ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳು ತಮ್ಮ ಬಳಿ ಇವೆ ಎಂದು ಸುರೇಶ್ ಹೇಳಿಕೊಂಡಿದ್ದಾನೆ. ಈ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿಂಡಲಗಾ ಜೈಲಿನ ಆಡಳಿತ ವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.
ವಿಡಿಯೋದಲ್ಲಿ ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿರುವ ಹಿನ್ನೆಲೆಯಲ್ಲಿ ಜೈಲು ಇಲಾಖೆ ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕಾದ ಅಗತ್ಯ ಎದುರಾಗಿದೆ. ಆರೋಪಗಳು ನಿಜವೇ ಅಥವಾ ವೈಯಕ್ತಿಕ ಕಾರಣಗಳಿಂದ ಮಾಡಿರುವ ಆರೋಪಗಳೇ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.




