ಶನಿವಾರ, 24 ಅಕ್ಟೋಬರ್ 2026

ಪೊಲೀಸ್ ಪರೀಕ್ಷೆ ಗೊಂದಲ | ಮೊದಲು 25 ದಿನ ಉಪವಾಸ ಕೂತು, ಲಾಠಿ ಚಾರ್ಜ್ ಆದ್ರೆ ರಾಜೀನಾಮೆ ಕೊಡ್ತೀನಿ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಕೆಲವು ದಿನಗಳ ಹಿಂದಷ್ಟೇ ಪೊಲೀಸ್ ನೇಮಕಾತಿಯ ಪರೀಕ್ಷೆ ನಡೆದಿದ್ದು ಈ ಪರೀಕ್ಷೆಯಲ್ಲಿ ಕೆಲವು ಅಕ್ರಮ ನಡೆದಿದೆ, ಕೆಲವು ಗೊಂದಲಗಳು ಉಂಟಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನೆಲೆ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಆದರೆ ಇದೆಲ್ಲದರ ನಡುವೆ ಪ್ರಿಯಾಂಕ್ ಖರ್ಗೆ ಅವರು ಅಚ್ಚರಿಯ ಸ್ಟೇಟ್ಮೆಂಟ್ ನೀಡಿದ್ದಾರೆ.

ಹೌದು, ಪರೀಕ್ಷಾ ಅಕ್ರಮ ಹಾಗೂ ಗೊಂದಲದ ಹಿನ್ನೆಲೆಯಲ್ಲಿ ರಾಜೀನಾಮೆ ಕೇಳುತ್ತಿರುವವರಿಗೆ ಖರ್ಗೆ ಅವರು ಅತ್ಯಂತ ವ್ಯಂಗ್ಯವಾಗಿ ತಿರುಗೇಟು ನೀಡಿದ್ದು, ಮೊದಲು ವಿದ್ಯಾರ್ಥಿಗಳು 25 ದಿನ ಉಪವಾಸ ಸತ್ಯಾಗ್ರಹ ಕೂರಲಿ, ಬಳಿಕ ಲಾಠಿ ಚಾರ್ಜ್ ಆಗಲಿ, ಆಮೇಲೆ ನಾನು ರಾಜೀನಾಮೆ ಕೊಡ್ತೀನಿ ಎಂದು ಸವಾಲು ಹಾಕಿದ್ದಾರೆ.

ಗೊಂದಲಕ್ಕೆ ಅಸಲಿ ಕಾರಣವೇನು?

ಪರೀಕ್ಷಾ ಕೇಂದ್ರಗಳಲ್ಲಿ ಸಂವಹನ ಕೊರತೆಯಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ. ಅಭ್ಯರ್ಥಿಗಳ ನಡುವೆ ಒಎಂಆರ್ ಶೀಟ್ ಮತ್ತು ಕ್ವೆಶ್ಚನ್ ಬ್ಯಾಂಕ್ ಸೀರಿಯಲ್ ನಂಬರ್ ಒಂದೇ ಆಗಿರಬೇಕು ಎನ್ನುವ ತಪ್ಪು ತಿಳುವಳಿಕೆ ಇತ್ತು. ಆದರೆ ವಾಸ್ತವದಲ್ಲಿ ಅಂತಹ ಯಾವುದೇ ನಿಯಮ ಇರಲಿಲ್ಲ. ಈ ಗೊಂದಲದಿಂದಾಗಿ ಕೆಲವರು ತಾವಾಗಿಯೇ ಪರೀಕ್ಷಾ ಕೇಂದ್ರದಿಂದ ಹೊರಗೆ ಹೋದರು. ಒಮ್ಮೆ ಹೊರಗೆ ಹೋದ ಮೇಲೆ ನಿಯಮದ ಪ್ರಕಾರ ಮತ್ತೆ ಒಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಮುಂದಿನ ಕ್ರಮದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಅಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಕೇಂದ್ರಗಳಲ್ಲಿ ಮಾತ್ರ ಇಂತಹ ಸಣ್ಣಪುಟ್ಟ ಸಮಸ್ಯೆಗಳಾಗಿವೆ. ಅದನ್ನೇ ದೊಡ್ಡದು ಮಾಡುವುದು ಸರಿಯಲ್ಲ. ಒಂದು ವೇಳೆ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸುಮ್ಮನಿರಲ್ಲ, ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಸಚಿವರ ಈ ಸ್ಫೋಟಕ ಹೇಳಿಕೆ ಈಗ ಅಭ್ಯರ್ಥಿಗಳ ವಲಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.