ಹಾಸನ ಹೊರವಲಯದ ಯಡಿಯೂರು ಗ್ರಾಮದಲ್ಲಿ ತಂದೆ ಮೊಬೈಲ್ ಕೊಡಿಸಲಿಲ್ಲ ಅಂತ 7ನೇ ತರಗತಿ ಓದುತ್ತಿದ್ದ 13 ವರ್ಷದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪ್ರೀತಂ (13) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ. ಪ್ರೀತಂ ಚಿತ್ರದುರ್ಗದ ಶ್ರೀನಿವಾಸ್-ಗೌರಮ್ಮ ದಂಪತಿ ಪುತ್ರನಾಗಿದ್ದು, ಕುಟುಂಬ ಸಮೇತ ಯಡಿಯೂರಿನಲ್ಲಿ ನಿರ್ಮಾಣವಾಗುತ್ತಿದ್ದ ಖಾಸಗಿ ಲೇಔಟ್‌ನಲ್ಲಿ ಕೆಲಸ ಮಾಡಲು ಬಂದಿದ್ದರು. ಶಾಲೆಗೆ ರಜೆ ಇದ್ದಿದ್ದರಿಂದ ಆತ ಯಡಿಯೂರಿನಲ್ಲಿದ್ದ ಹೆತ್ತವರ ಬಳಿಗೆ ಬಂದಿದ್ದ. ಅವರು ಪಕ್ಕದಲ್ಲಿದ್ದ ತಾತ್ಕಾಲಿಕ ಶೆಡ್‌ನಲ್ಲಿ ವಾಸವಿದ್ದರು.
ಕೆಲ ದಿನಗಳಿಂದ ಪ್ರೀತಮ್ ತನಗೆ ಮೊಬೈಲ್ ಕೊಡಿಸುವಂತೆ ತಂದೆಯ ಬಳಿ ಪಟ್ಟು ಹಿಡಿದಿದ್ದ. ಆದರೆ, ತಂದೆ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಬಾಲಕ, ಶೆಡ್‌ನಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಸೀರೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


