ಸುಪ್ರೀಂ ಕೋರ್ಟ್ನಲ್ಲಿ (Supreme Court) ಅರ್ಜಿದಾರನಾಗಿ ಹಾಜರಾದ ವ್ಯಕ್ತಿಯೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ನ್ಯಾಯಾಲಯದ ಕೊಠಡಿಯಲ್ಲಿ ಕಾಗದಗಳನ್ನು ಎಸೆದ ಘಟನೆ ನಡೆದಿದೆ.
Sponsoredಮಾಹಿತಿಯ ಪ್ರಕಾರ, ಬೆಳಗ್ಗೆ ಸುಮಾರು 11 ಗಂಟೆಗೆ ನ್ಯಾಯಮೂರ್ತಿಗಳಾದ ಕೆ.ವಿ.ವಿಶ್ವನಾಥನ್ ಹಾಗೂ ಅಲೋಕ್ ಅರಾಧೆ ಅವರನ್ನೊಳಗೊಂಡ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಅರ್ಜಿದಾರನಾಗಿ ಸ್ವತಃ ಹಾಜರಾಗಿದ್ದ ಪ್ರಬಲ್ ಪ್ರತಾಪ್ ಎಂಬ ವ್ಯಕ್ತಿ ತಾನೇ “ಸಾರ್ವಭೌಮ” ಎಂದು ಹೇಳಿಕೊಂಡು ನ್ಯಾಯಾಧೀಶರನ್ನ “ನ್ಯಾಯಾಂಗದ ಸೇವಕರು” ಎಂದು ಕರೆದಿದ್ದಾರೆ. ಅಲ್ಲದೆ ಲಕ್ನೋದ ಎಎಸ್ಪಿ ವಿರುದ್ಧ ಸೈಬರ್ ಅಪರಾಧ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯವೇ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅರ್ಜಿದಾರನ ಮಾತಿನ ಧಾಟಿಯನ್ನ ಗಮನಿಸಿದ ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್, “ನೀವು ನಮಗೆ ಆದೇಶ ನೀಡುತ್ತಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ. ಆಗ ಅರ್ಜಿದಾರ ಇನ್ನಷ್ಟು ಆಕ್ರೋಶಗೊಂಡು ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸಿದ್ದಾರೆ. ಬಳಿಕ ತಮ್ಮ ಕೈಯಲ್ಲಿದ್ದ ದಾಖಲೆಗಳನ್ನ ನ್ಯಾಯಾಲಯದೊಳಗೆ ಎಸೆದು ಕೆಲಸಕ್ಕೆ ಅಡ್ಡಿಪಡಿಸಿದರು.
ತಕ್ಷಣವೇ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಆ ವ್ಯಕ್ತಿಯನ್ನ ಸಭಾಂಗಣದಿಂದ ಹೊರಗೆ ಕರೆದೊಯ್ದು ನಿಯಂತ್ರಣಕ್ಕೆ ತೆಗೆದುಕೊಂಡರು. ನಂತರ ಆತನನ್ನು ನ್ಯಾಯಾಲಯದ ಕೊಠಡಿಯೊಳಗಿನ ಡಿಎಸ್ಪಿ ಕಚೇರಿಯಲ್ಲಿ ಸ್ವಲ್ಪ ಸಮಯದವರೆಗೆ ಬಂಧಿಸಲಾಯಿತು. ಈ ಅಡಚಣೆಯ ಹೊರತಾಗಿಯೂ, ಅರ್ಜಿದಾರರ ವಿರುದ್ಧ ನ್ಯಾಯಾಂಗ ನಿಂದನೆ ಅಥವಾ ಯಾವುದೇ ಇತರ ಕ್ರಮಗಳನ್ನು ಕೈಗೊಳ್ಳುವುದು ಬೇಡ ಎಂದು ಪೀಠ ನಿರ್ಧರಿಸಿತು.
ಅಲ್ಲದೆ ಮುಖ್ಯ ನಾಯಮೂರ್ತಿಗೆ ಅವಾಚ್ಯ ಶಬ್ದಗಳನ್ನ ಬಳಸಿದರೂ ನ್ಯಾಯಮೂರ್ತಿ ವಿಶ್ವನಾಥನ್ ಅವರು “ಆ ವ್ಯಕ್ತಿ ತುಂಬಾ ಮಾನಸಿಕವಾಗಿ ತೊಂದರೆಯಲ್ಲಿರುವಂತೆ ಕಾಣುತ್ತಾರೆ. ಇದು ಅವರಲ್ಲಿರುವ ನಿರಾಶೆಯ ಅಭಿವ್ಯಕ್ತಿ. ಅವರ ಬಗ್ಗೆ ನಮಗೆ ಸಹಾನುಭೂತಿ ಮಾತ್ರ ಇದೆ” ಎಂದಿದ್ದಾರೆ. ನ್ಯಾಯಾಲಯದ ಈ ಮಾನವೀಯ ದೃಷ್ಟಿಕೋನವು ಕಾನೂನು ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.




