ಶನಿವಾರ, 24 ಅಕ್ಟೋಬರ್ 2026

NEET ಮರು ಪರೀಕ್ಷೆ – ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ವಿಮಾನ ನಿಲ್ದಾಣದಲ್ಲೇ 45 ನಿಮಿಷ ಕಾದು ಕುಳಿತ ಪ್ರಧಾನಿ ಮೋದಿ!!

ದೇಶಾದ್ಯಂತ ಇಂದು (ಜೂ.21) ನೀಟ್-ಯುಜಿ (NEET UG 2026) ಮರುಪರೀಕ್ಷೆ ನಡೆಯುತ್ತಿರುವುದರಿಂದ, ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತಮ್ಮ ವಾಹನ ಸಂಚಾರದಿಂದ ಯಾವುದೇ ಅಡಚಣೆಯಾಗಬಾರದು ಎಂಬ ಕಾರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿಯೇ ಸುಮಾರು ಮುಕ್ಕಾಲು ಗಂಟೆಗಳ ಕಾಲ ಕಾದಿದ್ದರೆ.

ಮೋದಿಯವರು ಯೋಗ ದಿನಾಚರಣೆ ಮುಗಿಸಿ ಕೋಲ್ಕತ್ತಾದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ವಿದ್ಯಾರ್ಥಿಗಳು ನೀಟ್-ಯುಜಿ ಮರು ಪರೀಕ್ಷೆಗೆ ತೆರಳುತ್ತಿದ್ದರು. ಇದರಿಂದ ಸಂಚಾರ ಸುಗಮವಾಗಿಡಲು ಮತ್ತು ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಕ್ರಮದಿಂದಾಗಿ ದೆಹಲಿಯ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಿತ್ತು.

ಅಧಿಕೃತ ಮಾಹಿತಿಯ ಪ್ರಕಾರ, ಮಧ್ಯಾಹ್ನ 1:15ರ ಸುಮಾರಿಗೆ ಮೋದಿಯವರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದರು. ನೀಟ್ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿತ್ತು. ಅವರ ಪ್ರಯಾಣದ ವೇಳೆ ಭದ್ರತೆ ದೃಷ್ಟಿಯಿಂದ ಬೇರೆ ವಾಹನಗಳಿಗೆ ಮಾರ್ಗ ಮುಚ್ಚಲಾಗಿರುತ್ತದೆ. ಇದರಿಂದ ಪರೀಕ್ಷೆಗೆ ತೆರಳುವವರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು. ಅದಕ್ಕಾಗಿ ತಕ್ಷಣ ಅವರು ತಮ್ಮ ನಿವಾಸಕ್ಕೆ ತೆರಳದೆ ವಿಮಾನ ನಿಲ್ದಾಣದಲ್ಲಿಯೇ ಸ್ವಲ್ಪ ಹೊತ್ತು ಇರಲು ನಿರ್ಧರಿಸಿದರು

ಅಂದಹಾಗೆ ಮೇ 3 ರಂದು ನಡೆದಿದ್ದ ಮೊದಲ ಹಂತದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ಪ್ರಗತಿಯಲ್ಲಿರುವ ಬೆನ್ನಲ್ಲೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಭಾನುವಾರ ಕಟ್ಟುನಿಟ್ಟಿನ ಭದ್ರತೆಯೊಂದಿಗೆ ಈ ಮರುಪರೀಕ್ಷೆಯನ್ನು ಆಯೋಜಿಸಿದೆ. ಈ ಬಾರಿ ಪರೀಕ್ಷೆಯ ಅವಧಿಯನ್ನು ಮಧ್ಯಾಹ್ನ 2:00 ರಿಂದ ಸಂಜೆ 5:15 ರವರೆಗೆ ನಿಗದಿಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.