ಶನಿವಾರ, 24 ಅಕ್ಟೋಬರ್ 2026

ಮಡಿಕೇರಿ ಹಿಂದೂ ದೇವಾಲಯಕ್ಕೆ ಮುಸ್ಲಿಮರ ಅಕ್ರಮ ಪ್ರವೇಶ – ಆವರಣದಲ್ಲಿ ತಮ್ಮ ʻಸಮಾಧಿ ಪೂಜೆʼ ಆಚರಣೆ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗದ್ದಿ ಬೆಟ್ಟದ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಕೆಲ ಮುಸ್ಲಿಂಮರು ದೇವಾಲಯದ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ತಮ್ಮ ಸಂಪ್ರದಾಯದಂತೆ ಸಮಾಧಿ ಪೂಜೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ವಿರಾಜಪೇಟೆ ತಾಲೂಕಿನ ಮಾಲ್ದಾರೆ–ಮತ್ತೂರು ಸಮೀಪದ ಅರಣ್ಯ ಪ್ರದೇಶದಲ್ಲಿರುವ ಇತಿಹಾಸ ಪ್ರಸಿದ್ಧ ಗದ್ದಿ ಬೆಟ್ಟದ ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರಿನಲ್ಲಿ ಬಂದ ಕೆಲವರು ದೇವಾಲಯದ ಆವರಣಕ್ಕೆ ಪ್ರವೇಶಿಸಿ, ಮುಸ್ಲಿಂ ಸಂಪ್ರದಾಯದಂತೆ ʻಚಾದರ್ ಚಢಾನಾʼ ಮಾದರಿಯ ಆಚರಣೆ ನಡೆಸಿರುವ ಆರೋಪ ಕೇಳಿಬಂದಿದೆ. ಸ್ಥಳದಲ್ಲಿ ಹೂವು ಹಾಗೂ ಚಾದರ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯನ್ನ ಖಂಡಿಸಿ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ. ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಬಂಧಿಸುವಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಒತ್ತಾಯಿಸಿವೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಇದೀಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದ ಕುರಿತು ಪೊಲೀಸ್ ಹಾಗೂ ಸಂಬಂಧಪಟ್ಟ ಇಲಾಖೆಗಳ ತನಿಖೆ ಮುಂದುವರಿದಿದೆ.