ಸೋಮವಾರ, 26 ಅಕ್ಟೋಬರ್ 2026
Trending

ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಷೇಧಕ್ಕೆ ಮುಸ್ಲಿಮರಿಂದ ಸಂಪೂರ್ಣ ಒಪ್ಪಿಗೆ – ಆದ್ರೆ ಹಿಂದೂಗಳದ್ದೇ ಆಕ್ಷೇಪ, ಕಾರಣವೇನು ಗೊತ್ತೇ?

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಗೋ ಹತ್ಯೆ ನಿಷೇಧವನ್ನು ಜಾರಿಗೆ ತಂದಿದ್ದಾರೆ. ಬಿಜೆಪಿ ಸರ್ಕಾರದ ಈ ನಿರ್ಧಾರಕ್ಕೆ ಮುಸ್ಲಿಮರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಆದರೆ ಹಿಂದೂಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

Sponsored

ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ಜಾನುವಾರುಗಳ ವಧೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1950 ರ ಕಾನೂನು ಮತ್ತು 2018 ರ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಬೇರೆ ರಾಜ್ಯಗಳಲ್ಲಿ ಮುಸ್ಲಿಮರು ಗೋ ಹತ್ಯೆ ನಿಷೇಧಕ್ಕೆ ಆಕ್ಷೇಪ ಎತ್ತಿದ್ದರೂ ಕೂಡ, ಪಶ್ಚಿಮ ಬಂಗಾಳದಲ್ಲಿ ಇದಕ್ಕೆ ಮುಸ್ಲಿಂ ಸಂಘಟನೆಗಳು ಸೇರಿದಂತೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದು, ತಮ್ಮ ಹಬ್ಬಗಳಲ್ಲಿ ಗೋ ಹತ್ಯೆ ಮಾಡುವುದಿಲ್ಲ ಎಂದು ಹೇಳಿವೆ. ಆದರೆ ಅಚ್ಚರಿ ಎಂಬಂತೆ ಹಿಂದೂಗಳು ಗೋ ಹತ್ಯೆ ನಿಷೇಧದ ವಿರುದ್ಧ ಬೀದಿಗಿಳಿದಿದ್ದಾರೆ. ಇದಕ್ಕೆ ಕಾರಣ ಇಲ್ಲಿದೆ.

Advertisement
Advertisement

 ಸರ್ಕಾರ ತಂದ ಕಾನೂನಿನಲ್ಲಿ ಏನಿದೆ?

ಮೇ 13 ರಂದು ಹೊರಡಿಸಲಾದ ಹೊಸ ಸಾರ್ವಜನಿಕ ಪ್ರಕಟಣೆಯ ಪ್ರಕಾರ, ರಾಜ್ಯದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾನುವಾರುಗಳನ್ನು ವಧೆ ಮಾಡುವಂತಿಲ್ಲ. ಅಷ್ಟೇ ಅಲ್ಲದೆ, ಎತ್ತು, ಹೋರಿ, ಹಸು, ಕರು ಮತ್ತು ಎಮ್ಮೆಗಳನ್ನು ವಧೆ ಮಾಡಬೇಕಾದರೆ ಅವು ವಧೆಗೆ ಯೋಗ್ಯವಾಗಿವೆ ಎಂದು ಪಶುವೈದ್ಯರು ಹಾಗೂ ಪುರಸಭೆಯ ಅಧ್ಯಕ್ಷರು ಅಥವಾ ಪಂಚಾಯತ್ ಮುಖ್ಯಸ್ಥರು ಜಂಟಿ ಪ್ರಮಾಣಪತ್ರ ನೀಡುವುದು ಕಡ್ಡಾಯಗೊಳಿಸಲಾಗಿದೆ. ಈ ರೀತಿ ಪ್ರಮಾಣೀಕರಿಸಿದ ಪ್ರಾಣಿಗಳನ್ನು ಸಹ ಕೇವಲ ಸರ್ಕಾರ ಅನುಮೋದಿಸಿದ ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಲು ಅವಕಾಶ ನೀಡಲಾಗಿದೆ.

ಈದ್ ಅಲ್-ಅಧಾ (ಬಕ್ರೀದ್) ಹಬ್ಬದ ಸಂದರ್ಭದಲ್ಲಿ ಜಾನುವಾರು ವಧೆಯನ್ನು ನಿರ್ಬಂಧಿಸುವ ಸರ್ಕಾರದ ಈ ಅಧಿಸೂಚನೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಅರ್ಜಿಗಳನ್ನು ವಜಾಗೊಳಿಸಿದೆ.

ವಿರೋಧಕ್ಕೆ ಕಾರಣ?

ಈ ಕಾಯ್ದೆಯು ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ಗ್ರಾಮೀಣ ಭಾಗದ ಜನರ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಬಂಗಾಳದಾದ್ಯಂತ ಇರುವ ಜಾನುವಾರು ಮಾರುಕಟ್ಟೆಗಳು ಈಗ ಸಂಪೂರ್ಣವಾಗಿ ಕಳೆಗುಂದಿವೆ. ಹಬ್ಬದ ಸಮಯದಲ್ಲಿ ಹಸು ಹಾಗೂ ಎಮ್ಮೆಗಳನ್ನು ಮಾರಾಟ ಮಾಡಿ ವರ್ಷದ ಬಹುದೊಡ್ಡ ಆದಾಯ ಗಳಿಸುತ್ತಿದ್ದ ಹೈನುಗಾರರು ಮತ್ತು ವ್ಯಾಪಾರಿಗಳಿಗೆ ಈ ಹೊಸ ನಿಯಮ ತೀವ್ರ ನಿರಾಶೆ ಮೂಡಿಸಿದೆ.

ಪ್ರತಿದಿನ ಸುಮಾರು 2,000 ಹಸುಗಳನ್ನು ಮಾರಾಟ ಮಾಡುತ್ತಿದ್ದ ಪ್ರಸಿದ್ಧ ‘ಪೋಲೆರ್ಹತ್ ಗೋರು ಹಾತ್’ ಮಾರುಕಟ್ಟೆಯಲ್ಲಿ ಈಗ ಹಬ್ಬದ ಸನಿಹದಲ್ಲೂ ಕೇವಲ ಒಂದೆರಡು ಡಜನ್ ಜಾನುವಾರುಗಳು ಮಾತ್ರ ಕಾಣ ಸಿಗುತ್ತಿವೆ. ಜಾನುವಾರು ವ್ಯಾಪಾರ ಹಾಗೂ ಮಾಂಸದ ಉದ್ಯಮವನ್ನು ನಂಬಿಕೊಂಡಿರುವ ಸಾಗಣೆದಾರರು, ಚರ್ಮದ ವ್ಯಾಪಾರಿಗಳು ಮತ್ತು ಕಸಾಯಿಖಾನೆ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಹೀಗಾಗಿ, ಗ್ರಾಮೀಣ ಭಾಗದಲ್ಲಿ ವಯಸ್ಸಾದ ಜಾನುವಾರುಗಳನ್ನು ಸಾಕುವುದು ಹೊರೆಯಾಗುವುದರಿಂದ ಮತ್ತು ಹಬ್ಬದ ವ್ಯಾಪಾರಕ್ಕೆ ಕುತ್ತು ಬಂದಿರುವುದರಿಂದ ಸ್ಥಳೀಯ ರೈತರು ಮತ್ತು ವ್ಯಾಪಾರಿ ವಲಯದಿಂದ ಈ ನಿಯಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. 

Advertisement