ಪುತ್ತೂರಿನ ದರ್ಬೆ ಜೆರಾಕ್ಸ್ ಅಂಗಡಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ‘ಪುತ್ತೂರು ಚಲೋ’ ಪ್ರತಿಭಟನೆಗೆ ಕರೆ ನೀಡಿದೆ. ಇದಕ್ಕೆ ಪ್ರತಿಯಾಗಿ, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅದೇ ದಿನ ಅಂದರೆ ಆಗಸ್ಟ್ 31ರಂದು ‘ಪುತ್ತೂರು ಸೌಹಾರ್ದ ರ್ಯಾಲಿ’ ಆಯೋಜಿಸಲು ನಿರ್ಧರಿಸಿದೆ.
Sponsoredಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, “ಪುತ್ತೂರಿನಲ್ಲಿ ನಡೆದ ಸಣ್ಣ ಘಟನೆಯನ್ನು ಕೋಮುವಾದಿ ಸಂಘಟನೆಗಳು ದೊಡ್ಡ ವಿಚಾರವನ್ನಾಗಿ ಮಾಡುತ್ತಿವೆ. ಆಗಸ್ಟ್ 25ರಂದು ಆ ಸಂಘಟನೆಗಳು ಕರೆ ನೀಡಿದ್ದ ಬಂದ್ ಸಂಪೂರ್ಣ ವಿಫಲವಾಗಿದೆ. ಇದೀಗ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಜನರನ್ನು ಕರೆತಂದು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ” ಎಂದು ಆರೋಪಿಸಿದರು.
ಅಲ್ಲದೆ ಪುತ್ತೂರಿನಲ್ಲಿ ಪ್ರಸ್ತುತ ಯಾವುದೇ ಅಶಾಂತಿಯ ವಾತಾವರಣ ಸೃಷ್ಟಿಯಾಗಿಲ್ಲ, ಇಲ್ಲಿ ಎಲ್ಲಾ ಧರ್ಮದ ಬಾಂಧವರು ಒಗ್ಗಟ್ಟಾಗಿದ್ದಾರೆ. ಆದರೆ, ಜಿಲ್ಲೆಯ ಹೊರಗಿನಿಂದ ಜನರನ್ನು ಕರೆತಂದು ಇಲ್ಲಿ ಅಶಾಂತಿ ಸೃಷ್ಟಿಸಲು ಹುನ್ನಾರ ನಡೆಸಲಾಗುತ್ತಿದೆ. ಈ ಯತ್ನವನ್ನು ತಡೆಯುವುದೇ ನಮ್ಮ ‘ಸೌಹಾರ್ದ ರ್ಯಾಲಿ ‘ಯ ಮುಖ್ಯ ಉದ್ದೇಶವಾಗಿದೆ. ಈ ರ್ಯಾಲಿಯಲ್ಲಿ ರಾಜ್ಯದ ವಿವಿಧ ಚಿಂತಕರು, ಪ್ರಗತಿಪರರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ” ಎಂದು ಅಶ್ರಫ್ ಕಲ್ಲೇಗ ತಿಳಿಸಿದರು.




