ಮಂಗನಿಗೆ ಹೆಂಡ ಕುಡಿಸಿದ ಹಾಗೆ ಎಂಬ ಆಡು ಮಾತೊಂದಿದೆ. ಅಂದರೆ ಯಾರಾದರೂ ಕಪಿಚೇಷ್ಟೆ ಮಾಡುತ್ತಿದ್ದರೆ ಅವರಿಗೆ ಹೇಳುವ ಮಾತಿದು. ಅದ್ರೆ ಈ ಆಡು ಮಾತು ನಿಜವಾದರೆ? ಅಂದರೆ ಮಂಗ ನುಜಾವಾಗಲೂ ಹೆಂಡ ಕುಡಿದರೆ ಹೇಗಿರುತ್ತದೆ? ಹೇಗಿರುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ. ಯಾಕಂದ್ರೆ ಇಲ್ಲೊಂದೆಡೆ ಮಂಗವೊಂದು ವೈನ್ ಶಾಪ್ ನುಗ್ಗಿ ಎಣ್ಣೆ ಹೊಡೆದು ವೈರಲ್ ಆಗುತ್ತಿದೆ.
ಹೌದು, ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಲ್ಲಿ ವೈನ್ ಶಾಪ್ ಒಂದಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಗರ್ಭಿಣಿ ಮಂಗವೊಂದು, ಅಂಗಡಿಯಲ್ಲಿದ್ದ ಮದ್ಯವನ್ನು ಸೇವಿಸಿ ನಿದ್ದೆಗೆ ಜಾರಿದ್ದು, ಪ್ರಸ್ತುತ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಜಾರ್ಖಂಡ್ನ ರಾಂಚಿ ಜಿಲ್ಲೆಯ ಓರ್ಮಾಂಜಿ ಎಂಬಲ್ಲಿ ವೈನ್ ಶಾಪ್ನ ಬಾಗಿಲು ತೆರೆದಿರುವುದನ್ನು ಕಂಡ ಗರ್ಭಿಣಿ ಹೆಣ್ಣು ಕೋತಿಯೊಂದು ದಿಢೀರನೆ ಅಂಗಡಿಯೊಳಗೆ ಪ್ರವೇಶಿಸಿ ಆವರಣದಲ್ಲಿ ಅಡ್ಡಾಡಲು ಶುರುಮಾಡಿದೆ. ಮದ್ಯದಂಗಡಿಯ ಸಿಬ್ಬಂದಿ ಹಾಗೂ ಗ್ರಾಹಕರು ಇದನ್ನು ಕಂಡು ಆಶ್ಚರ್ಯಗೊಳ್ಳುವಷ್ಟರಲ್ಲೇ, ಅತ್ತ ಇರಿಸಲಾಗಿದ್ದ ವೋಡ್ಕಾ ಬಾಟಲಿಯಲ್ಲಿದ್ದ ಮದ್ಯವನ್ನು ಅದು ಸೇವಿಸಿದೆ. ಮದ್ಯದ ಪ್ರಭಾವದಿಂದಾಗಿ ಕಿಕ್ ಏರಿದ ಕೋತಿಯು ಪ್ರಜ್ಞೆ ತಪ್ಪಿದಂತೆ ಅಲ್ಲೇ ಇದ್ದ ಬಾಕ್ಸ್ (ಪೆಟ್ಟಿಗೆ) ಗಳ ಮೇಲೆ ನೆಮ್ಮದಿಯಾಗಿ ಮಲಗಿದೆ.
ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. ವೀಡಿಯೋದಲ್ಲಿ ಕೋತಿಯು ವೈನ್ ಶಾಪ್ನ ಪೆಟ್ಟಿಗೆಗಳ ಮೇಲೆ ಅತ್ಯಂತ ಶಾಂತವಾಗಿ ನಿದ್ದೆ ಮಾಡುತ್ತಿರುವುದನ್ನು ಹಾಗೂ ಪಕ್ಕದಲ್ಲೇ ಕ್ವಾರ್ಟರ್ ವೋಡ್ಕಾ ಬಾಟಲಿ ಇರುವುದನ್ನು ಕಾಣಬಹುದು. ಈ ವೀಡಿಯೋ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದ್ದಂತೆಯೇ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಲಾರಂಭಿಸಿದ್ದಾರೆ. ಅಲ್ಲದೆ ಪ್ರಾಣಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.



