ಸಾಮಾಜಿಕ ಮಾಧ್ಯಮದಲ್ಲಿ ಮಾನವ ಜನನಾಂಗಕ್ಕೆ ವಿದೇಶಗಳಲ್ಲಿ ಬರೋಬ್ಬರಿ 1.20 ಕೋಟಿ ಬೆಲೆಯಿದೆ ಎಂದು ವೈರಲ್ ಆದ ನಕಲಿ ರೀಲ್ ನಂಬಿದ ಐವರ ಗ್ಯಾಂಗ್, 17 ವರ್ಷದ ಬಾಲಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿ ಆತನ ಜನನಾಂಗಗಳನ್ನು ತೆಗೆದು ಎಸೆದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಬೀದಿಗಳಲ್ಲಿ ಪೆನ್ನು ಹಾಗೂ ಕೀಚೈನ್ಗಳನ್ನು ಮಾರಾಟ ಮಾಡುತ್ತಿದ್ದ 17 ವರ್ಷದ ಯುವಕ ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಸೂತ್ರಧಾರಿ, ಬಿಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ ಸೋಹಾಬ್ ಖಾನ್ (20), ಆಮಿರ್ ಖುರೇಷಿ (18) ಹಾಗೂ ಮೂವರು ಅಪ್ರಾಪ್ತ ವಯಸ್ಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಹೇಗೆ ನಡೆಯಿತು ಘಟನೆ?
ಆರೋಪಿ ಸೋಹಾಬ್ ಖಾನ್ ತಾನು ನಕಲಿ ವೈದ್ಯನಂತೆ ನಟಿಸಿ ಈ ಕೊಲೆಗೆ ಸಂಚು ರೂಪಿಸಿದ್ದ. 15 ವರ್ಷ ಮೇಲ್ಪಟ್ಟ ಬಾಲಕನನ್ನು ಆಯ್ಕೆ ಮಾಡುವಂತೆ ತನ್ನ ಸಹಚರರಿಗೆ ಸೂಚಿಸಿದ್ದ. ಆಗಸ್ಟ್ 6 ರಂದು ಬಾಲಕನಿಗೆ ₹100 ನೀಡುವುದಾಗಿ ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಬಳಿಕ ಸೋಹಾಬ್ ವೀಡಿಯೊ ಕಾಲ್ನಲ್ಲಿ ನೀಡುತಿದ್ದ ಸೂಚನೆಯಂತೆ ಬ್ಲೇಡ್ನಿಂದ ಬಾಲಕನ ವೃಷಣಗಳನ್ನು ಬೇರ್ಪಡಿಸಿ ಪ್ಲಾಸ್ಟಿಕ್ ಕವರ್ನಲ್ಲಿ ಒಯ್ದಿದ್ದರು.
ಆಗಸ್ಟ್ 10 ರಂದು ಛೋಟಾ ತಲಾಬ್ನ ಧೋಬಿ ಘಾಟ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಗುರುತು ಸಿಗದ ಕಾರಣ ಪೊಲೀಸರು ದಹನ ಮಾಡಿದ್ದರು. ಆದರೆ ಆಗಸ್ಟ್ 15 ರಂದು ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಕೈ ಮೇಲಿದ್ದ ಹಚ್ಚೆ (Tattoo) ಸಹಾಯದಿಂದ ಮೃತನ ಗುರುತು ಪತ್ತೆಯಾಗಿ ತನಿಖೆ ತೀವ್ರಗೊಂಡಾಗ ಆರೋಪಿಗಳು ಪಟ್ಟೆಯಾಗಿದ್ದಾರೆ. ಸಂಗ್ರಹಿಸಿದ ಜನನಾಂಗಗಳನ್ನು ಯಾರೂ ಖರೀದಿಸುವುದಿಲ್ಲ ಎಂದು ತಿಳಿದ ಬಳಿಕ ಆರೋಪಿಗಳು ಮೂರು ದಿನಗಳ ನಂತರ ಅದನ್ನು ಸರೋವರಕ್ಕೆ ಎಸೆದಿದ್ದರು.
ಇನ್ನೂ “ಇದರ ಹಿಂದೆ ಯಾವುದೇ ಅಂಗಾಂಗ ಕಳ್ಳಸಾಗಣೆ ಜಾಲವಿಲ್ಲ, ಕೇವಲ ಇನ್ಸ್ಟಾಗ್ರಾಮ್ ರೀಲ್ ನಂಬಿ ಈ ಅಪರಾಧ ಎಸಗಿದ್ದಾರೆ. ಆ ಹುಚ್ಚು ವೀಡಿಯೊದ ಮೂಲವನ್ನು ಸೈಬರ್ ಸೆಲ್ ತನಿಖೆ ಮಾಡುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.




