ಸೋಮವಾರ, 26 ಅಕ್ಟೋಬರ್ 2026
Trending

ಮಂಗಳೂರು to ಮುಂಬೈ KSRTC ಯಲ್ಲಿ 34 ವರ್ಷ ಅಪೂರ್ವ ಸೇವೆ – ನಿವೃತ್ತ ಚಾಲಕ ಜೋಸೆಫ್ ಮಚಾದೊ ಅವರಿಗೆ ಅದ್ದೂರಿ ಸನ್ಮಾನ

ದೀರ್ಘಕಾಲದ ಸೇವೆ ಮುಗಿಸಿ ನಿವೃತ್ತರಾಗುವ ಕ್ಷಣ ಪ್ರತಿಯೊಬ್ಬರಿಗೂ ಭಾವುಕವಾಗಿರುತ್ತದೆ. ಅದರಲ್ಲೂ ಸಾರ್ವಜನಿಕ ಸಾರಿಗೆಯಲ್ಲಿ ದಶಕಗಳ ಕಾಲ ಲಕ್ಷಾಂತರ ಜನರನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸಿದ ಚಾಲಕನೊಬ್ಬನ ನಿವೃತ್ತಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Sponsored

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (KSRTC) ಸುದೀರ್ಘ 34 ವರ್ಷಗಳಿಗೂ ಹೆಚ್ಚು ಕಾಲ ಅಪಘಾತ ರಹಿತ ಹಾಗೂ ಸಮರ್ಪಿತ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಚಾಲಕ ಜೋಸೆಫ್ ಮಚಾದೊ ಅವರನ್ನು ಮುಂಬೈನ ಮೀರಾ ರೋಡ್ ಪ್ರಯಾಣಿಕರು ಹಾಗೂ ಬಸ್ ಉತ್ಸಾಹಿಗಳು ಒಟ್ಟಾಗಿ ಸೇರಿ ಅತ್ಯಂತ ಸಡಗರದಿಂದ ಸನ್ಮಾನಿಸಿ ಗೌರವಿಸಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ.

‘Going to miss this man’ (ಈ ವ್ಯಕ್ತಿಯನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ) ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ಈ ವಿಡಿಯೋ, ಬಸ್ ಚಾಲಕರು ತಮ್ಮ ವೃತ್ತಿ ಮತ್ತು ವಾಹನದೊಂದಿಗೆ ಬೆಳೆಸಿಕೊಳ್ಳುವ ಅಪಾರ ಭಾವನಾತ್ಮಕ ಬಂಧಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆಯೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಚಾಲಕನಿಗೆ ಶುಭ ಹಾರೈಕೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಯಾವುದೇ ಅಪಘಾತಗಳಿಲ್ಲದೆ 34 ವರ್ಷಗಳ ಕಾಲ ಜನರನ್ನು ಸುರಕ್ಷಿತವಾಗಿ ಕರೆದೊಯ್ದ ಇವರ ಸೇವೆ ಶ್ಲಾಘನೀಯ, ಇದು ಕೇವಲ ಕೆಲಸವಲ್ಲ, ಅವರ ಪಾಲಿನ ದೇವಸ್ಥಾನ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

ಇನ್ನೂ ಮೂಲತಃ ಉಡುಪಿ ಜಿಲ್ಲೆಯ ಉದ್ಯಾವರದವರಾದ ಜೋಸೆಫ್ ಮಚಾದೊ ಅವರು ತಮ್ಮ ಮೂರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಪ್ರಮುಖವಾಗಿ ಮಂಗಳೂರು-ಮುಂಬೈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿಯ ಪ್ರತಿಷ್ಠಿತ ‘ವೋಲ್ವೋ ಸೆಮಿ-ಸ್ಲೀಪರ್’ ಬಸ್ ಸೇವೆಯನ್ನು ನಿರ್ವಹಿಸುತ್ತಿದ್ದರು. ಈ ಸುದೀರ್ಘ ಅವಧಿಯಲ್ಲಿ ಮುಂಬೈ ಮತ್ತು ಕರಾವಳಿ ಭಾಗದ ನಡುವೆ ಸಂಚರಿಸುವ ಸಾವಿರಾರು ನಿಯಮಿತ ಪ್ರಯಾಣಿಕರೊಂದಿಗೆ ಅವರು ಅತ್ಯಂತ ಆಪ್ತ ಬಾಂಧವ್ಯ ಹೊಂದಿದ್ದರು. ಅವರ ವೃತ್ತಿಪರತೆ, ಸುರಕ್ಷಿತ ಚಾಲನೆ ಮತ್ತು ಪ್ರಯಾಣಿಕರೊಂದಿಗಿನ ವಿನಯಶೀಲ ಸ್ವಭಾವ ಸದಾ ಶ್ಲಾಘನೀಯವಾಗಿತ್ತು.ಜೋಸೆಫ್ ಮಚಾದೊ ಅವರ ನಿವೃತ್ತಿಯ ಸಂದರ್ಭವನ್ನು ಸ್ಮರಣೀಯವಾಗಿಸಲು ಮುಂಬೈನ ಮೀರಾ ರಸ್ತೆಯ ನಿಯಮಿತ ಪ್ರಯಾಣಿಕರು ಮತ್ತು ಸ್ಥಳೀಯ ಬಸ್ ಏಜೆಂಟ್‌ಗಳು ಜಂಟಿಯಾಗಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.