ಮಂಗಳೂರು; ನಗರದ ಕೆಎಫ್ಸಿ ರೆಸ್ಟೋರೆಂಟ್ ಶಾಖೆಯಲ್ಲಿ ಹಳೆಯ ಕೋಳಿ ಮಾಂಸ ಪೂರೈಸಲಾಗುತ್ತಿದೆ ಎನ್ನುವ ಗ್ರಾಹಕರ ದೂರಿನನ್ವಯ ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ಕೆಎಫ್ಸಿ ಸಂಸ್ಥೆಯು “ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿ ವಾಸ್ತವಕ್ಕೆ ದೂರವಾಗಿದೆʼ ಎಂದು ತಿಳಿಸಿದೆ.
ಮಂಗಳೂರಿನ ಕೆಎಫ್ಸಿ ಔಟ್ಲೆಟ್ಗೆ ಭೇಟಿ ನೀಡಿದ ಆಹಾರ ಸಚಿವ ಯು.ಟಿ.ಖಾದರ್ ಅವರ ನಿರ್ದೇಶನದ ಮೇರೆಗೆ ಸುರಕ್ಷತಾ ಅಧಿಕಾರಿಗಳು ಮಾಂಸದ ಮಾದರಿಗಳನ್ನು ಸಂಗ್ರಹ ಮಾಡಿ, ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಜೊತೆಗೆ ತಂಪು ಶೇಖರಣಾ ಕೊಠಡಿಯನ್ನು ಸ್ವಚ್ಛಗೊಳಿಸಲು ಮತ್ತು ಹಾಲಿ ಇರುವ ದಾಸ್ತಾನನ್ನು ತೆರವುಗೊಳಿಸಲು ಸೂಚಿಸಿದ್ದಾರೆ.
ಕೆಎಫ್ಸಿ ನೀಡಿರುವ ಸ್ಪಷ್ಟನೆ ಈ ರೀತಿ ಇದೆ;
ಗುಣಮಟ್ಟ ನಿರ್ವಹಣೆ: “ನಮ್ಮ ಎಲ್ಲ ಔಟ್ಲೆಟ್ಗಳಲ್ಲಿ ಶೇಖರಿಸುವ ಮತ್ತು ಸರಬರಾಜು ಮಾಡುವ ಕೋಳಿ ಮಾಂಸವನ್ನು (FSSAI) ಮಾರ್ಗದರ್ಶಿ ಸೂತ್ರಗಳ ಹಾಗೂ ಜಾಗತಿಕ ನಿಯಮಾವಳಿಗಳ ಪ್ರಕಾರವೇ ನಿರ್ವಹಿಸಲಾಗುತ್ತದೆ.”
ದೈನಂದಿನ ತಯಾರಿಕೆ: ತೋಟದಿಂದ ಗ್ರಾಹಕರ ತಟ್ಟೆಯವರೆಗೆ ಪ್ರತಿಯೊಂದು ಹಂತದಲ್ಲೂ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತದೆ. ಪ್ರತಿದಿನ ತಾಜಾ ಮಾಂಸವನ್ನೇ ಬಳಸಿ ಆಹಾರ ಸಿದ್ಧಪಡಿಸಲಾಗುತ್ತದೆ.
ಅಧಿಕಾರಿಗಳಿಗೆ ಸಹಕಾರ: ತನಿಖೆಗೆ ಆಡಳಿತ ಮಂಡಳಿಯು ಪೂರ್ಣ ಸಹಕಾರ ನೀಡುತ್ತಿದ್ದು, ಕಾನೂನು ನಿಯಮಾವಳಿಗಳಂತೆ ಪರಿಶೀಲನೆ ನಡೆಸಲಾಗುತ್ತಿದೆ.
ಕಿಚನ್ ಟೂರ್ ಆಫರ್: ಗ್ರಾಹಕರು ಕೆಎಫ್ಸಿಯ ಅಡುಗೆಮನೆಯ ಶುಚಿತ್ವ ಹಾಗೂ ಸುರಕ್ಷತಾ ಕ್ರಮಗಳನ್ನು ನೇರವಾಗಿ ವೀಕ್ಷಿಸಲು ಇಚ್ಛಿಸಿದರೆ, ರೆಸ್ಟೋರೆಂಟ್ ಮ್ಯಾನೇಜರ್ ಅನ್ನು ಸಂಪರ್ಕಿಸಿ ‘ಕಿಚನ್ ಟೂರ್’ ಮಾಡಬಹುದು.
ಈ ನಡುವೆ ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಸಚಿವ ಯು.ಟಿ. ಖಾದರ್, ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಯಾವುದೇ ಹೋಟೆಲ್ಗಳು ಅಥವಾ ಹೋಟೆಲ್ ಶೃಂಖಲೆಗಳು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.



