ಶನಿವಾರ, 24 ಅಕ್ಟೋಬರ್ 2026

ರೈತನನ್ನು ಅರ್ಧ ಗಂಟೆ ಕಚ್ಚಿ ಹಿಡಿದ ಸಿಂಹ!!

ಸಿಂಹವೊಂದು ರೈತನನ್ನು ಅರ್ಧ ಗಂಟೆ ಕಾಲ ಕಚ್ಚಿ ಹಿಡಿದ ಘಟನೆ ಗುಜರಾತ್‌ನ ಭಾವನಗರ ಜಿಲ್ಲೆಯ ಗರಾಜಿಯಾ ಗ್ರಾಮದಲ್ಲಿ ನಡೆದಿದೆ. ಈ ಆಘಾತಕಾರಿ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. 

ಸ್ಥಳೀಯ ವರದಿಗಳ ಪ್ರಕಾರ, ಗಾರ್ಜಿಯಾ ಗ್ರಾಮದ ಮಾಲ್ಧಾರಿ ಸಮುದಾಯದ ನಿವಾಸಿ ಕಲುಭಾಯಿ ಬೋಘಭಾಯಿ ಗಮಾರ ಎಂಬುವವರ ಮೇಲೆ ಸಿಂಹ ಅಟ್ಯಾಕ್ ಮಾಡಿದೆ. ಕಲುಭಾಯಿ ತಮ್ಮ ಮನೆಯ ಮುಂದೆ ನಿಂತಿದ್ದಾಗ, ಸಿಂಹವು ಅವರ ಮೇಲೆ ಎರಗಿದೆ. ಇದರಿಂದ ಕೆಳಗೆ ಬಿದ್ದ ಕಲುಭಾಯಿ ಅವರ ಕಾಲುಗಳನ್ನು ಸಿಂಹ ಹಿಡಿದುಕೊಂಡು ಕಚ್ಚಿದೆ. ಈ ದಾಳಿಯಿಂದ ಕಲುಭಾಯಿ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಸಿಂಹ ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 46 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ, ಸಿಂಹದ ಹಿಡಿತದಿಂದ ತಪ್ಪಿಸಿಕೊಳ್ಳಲು ಕಲುಭಾಯಿ ಒದ್ದಾಡುತ್ತಿರುವುದನ್ನು ನೋಡಬಹುದು. ಅವರ ಕಾಲುಗಳನ್ನು ಸಿಂಹ ಬಿಗಿಯಾಗಿ ಹಿಡಿದುಕೊಂಡಿತ್ತು. ಗ್ರಾಮಸ್ಥರು ಸಿಂಹವನ್ನು ಓಡಿಸಲು ಜೋರಾಗಿ ಕಿರುಚಾಡುತ್ತಿರುವುದು ಕೇಳಿಸುತ್ತದೆ. ಕೆಲವರು ಸಿಂಹದ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ.

ಕೆಲ ಕಾಲ ಗ್ರಾಮಸ್ಥರನ್ನು ಆತಂಕದಲ್ಲಿಟ್ಟ ಸಿಂಹ, ಕೊನೆಗೆ ಕಲುಭಾಯಿ ಅವರನ್ನು ಬಿಟ್ಟು ಕಾಡಿನೊಳಗೆ ಓಡಿಹೋಗಿದೆ. ತಕ್ಷಣವೇ, ಗಾಯಗೊಂಡ ಕಲುಭಾಯಿ ಅವರನ್ನು ಪಾಲಿತಾನದಲ್ಲಿರುವ ಮಾನ್‌ಸಿಂಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯಿಂದ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ದಾಳಿಯ ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅಧಿಕಾರಿಗಳು ತಡವಾಗಿ ಬಂದಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಅರಣ್ಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.