ಬೆಂಗಳೂರಿನಿಂದ ಮುಟ್ಟಿನ ಕಪ್ಗಳು ಹಾಗೂ ಒಳ ಉಡುಪುಗಳಲ್ಲಿ ಮರೆಮಾಚಿ ಅಕ್ರಮವಾಗಿ ಎಂಡಿಎಂಎ ಸಿಂಥೆಟಿಕ್ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ ಲಿವ್-ಇನ್ ದಂಪತಿಯನ್ನು ಎರ್ನಾಕುಲಂ ವಿಭಾಗದ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆಲಪ್ಪುಳದ ತ್ರಿಕ್ಕುನ್ನಪುಳ (ಕೊಟ್ಟೆಮುರಿ) ಮೂಲದ ಮೊಹಮ್ಮದ್ ಶಫಿ (29) ಮತ್ತು ಆತನ ಲಿವ್-ಇನ್ ಪಾರ್ಟ್ನರ್ ಸರಿತಾ (ಆಲಪ್ಪುಳ ಮೂಲದವಳು) ಎಂದು ಗುರುತಿಸಲಾಗಿದೆ.
ಮಾದಕ ದ್ರವ್ಯ ವಿರೋಧಿ ಅಭಿಯಾನ ‘ಆಪರೇಷನ್ ಥಂಡರ್’ ನ ಭಾಗವಾಗಿ, ಉಪ ಅಬಕಾರಿ ಆಯುಕ್ತ ಸತೀಶ್ ಪಿ.ಕೆ ಅವರ ನಿರ್ದೇಶನದ ಮೇರೆಗೆ ಎರ್ನಾಕುಲಂ ಅಬಕಾರಿ ವಲಯ ಕಚೇರಿಯ ಅಧಿಕಾರಿಗಳು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ಅಧಿಕಾರಿಗಳು ಒಟ್ಟು 94.032 ಗ್ರಾಂ ಎಂಡಿಎಂಎ, ₹17,770 ನಗದು ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರು ಲಾಭ ಹೆಚ್ಚಿಸಿಕೊಳ್ಳಲು ಈ ಡ್ರಗ್ಸ್ಗೆ ‘ಅಜಿನೊಮೊಟೊ’ ಬೆರೆಸಿ, ಎರ್ನಾಕುಲಂ ಮತ್ತು ಆಲಪ್ಪುಳದ ನೈಟ್ಕ್ಲಬ್ ಹಾಗೂ ರಾತ್ರಿ ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಕಳೆದ ನಾಲ್ಕು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದ ಈ ಜೋಡಿ, ಎರ್ನಾಕುಲಂ ದಕ್ಷಿಣ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಒಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದಿತ್ತು. ಅಲ್ಲಿಯೇ ದಾಳಿ ಮಾಡಿ ಅವರನ್ನು ಹಿಡಿಯಲಾಗಿದೆ.
ಸಾಗಾಟಕ್ಕೆ ಖತರ್ನಾಕ್ ಪ್ಲಾನ್ :
ಸುಮಾರು 100 ಗ್ರಾಂ ಸ್ಫಟಿಕದಂತಹ ಎಂಡಿಎಂಎ ಯನ್ನು ಜಿಪ್-ಲಾಕ್ ಪೌಚ್ನಲ್ಲಿಟ್ಟು, ಕಪ್ಪು ಇನ್ಸುಲೇಷನ್ ಟೇಪ್ನಿಂದ ಸುತ್ತಿ, ಮುಟ್ಟಿನ ಕಪ್ ಒಳಗೆ ಇರಿಸಲಾಗುತ್ತಿತ್ತು. ನಂತರ ಸರಿತಾ ಸೂಪರ್ ಗ್ಲೂ ಬಳಸಿ ಸೀಲ್ ಮಾಡಿ, ಪ್ರಯಾಣದ ಸಮಯದಲ್ಲಿ ಅದನ್ನು ತನ್ನ ದೇಹದೊಳಗೆ ಮರೆಮಾಡಿಕೊಳ್ಳುತ್ತಿದ್ದಳು. ಅಲ್ಲದೆ ಹೆಚ್ಚುವರಿಯಾಗಿ 5 ರಿಂದ 10 ಗ್ರಾಂ ನಷ್ಟು ಡ್ರಗ್ಸ್ ಅನ್ನು ಒಳ ಉಡುಪುಗಳ ಪ್ಯಾಡಿಂಗ್ ಒಳಗೆ ಹೊಲಿದು ತರಲಾಗುತ್ತಿತ್ತು. ಜಾರಿ ಸಂಸ್ಥೆಗಳ ಕಣ್ಣು ತಪ್ಪಿಸಲು ಇವರು ನೇರ ರೈಲು ಪ್ರಯಾಣವನ್ನು ತಪ್ಪಿಸಿ, ತಡರಾತ್ರಿಯ ಅಂತರರಾಜ್ಯ ಬಸ್ಗಳು ಹಾಗೂ ಹಲವು ಬಸ್ಗಳನ್ನು ಬದಲಾಯಿಸಿ ಪ್ರಯಾಣಿಸುತ್ತಿದ್ದರು. ಆರೋಪಿಗಳು ತಮಗಾಗುವ ಲಾಭವನ್ನು ಹೆಚ್ಚಿಸಿಕೊಳ್ಳಲು ಭಾರಿ ಚಾಲಾಕಿತನ ಪ್ರದರ್ಶಿಸುತ್ತಿದ್ದರು.
ಇದಲ್ಲದೆ ಕಲಬೆರಕೆ ಮಾಡಿದ ಔಷಧವನ್ನು 10 ರಿಂದ 15 ಗ್ರಾಂಗಳ ಸಣ್ಣ ಪ್ಯಾಕೆಟ್ ಮಾಡಿ, ಪ್ರತಿ ಗ್ರಾಂಗೆ ₹3,000 ರಿಂದ ₹4,000 ವರೆಗೆ ಮಾರಾಟ ಮಾಡುತ್ತಿದ್ದರು. ಪ್ರತಿಯೊಂದು ವಾರದ ಪ್ರವಾಸದಿಂದ ದಂಪತಿ ₹2.75 ಲಕ್ಷದಿಂದ ₹3.5 ಲಕ್ಷದವರೆಗೆ ಅಕ್ರಮವಾಗಿ ಗಳಿಸುತ್ತಿದ್ದರು ಎಂದೂ ತಿಳಿದುಬಂದಿದೆ.



