ಸೋಮವಾರ, 26 ಅಕ್ಟೋಬರ್ 2026
Trending

Kodagu: ಟ್ರಕ್ಕಿಂಗ್ ವೇಳೆ ನಾಪತ್ತೆಯಾಗಿದ್ದ ಕೇರಳ ಯುವತಿ 4 ದಿನಗಳ ಬಳಿಕ ಪತ್ತೆ !!

Kodagu: ಮಡಿಕೇರಿ ಬಳಿಯ ತಡಿಯಂಡಮೊಳ್ ಬೆಟ್ಟಕ್ಕೆ ಟ್ರೆಕಿಂಗ್ ಗೆ ಹೋಗಿದ್ದಾಗ ನಾಪತ್ತೆಯಾಗಿದ್ದ ಕೇರಳ ಮೂಲದ ಯುವತಿ ಶರಣ್ಯ,  ಕೊನೆಗೂ 4 ದಿನದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

Sponsored

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಕೇರಳ ಮೂಲದ ಯುವತಿ ಶರಣ್ಯ ಜಿ.ಎಸ್. ನಿನ್ನೆ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ‌ಕ್ಕೆ ತೆರಳಿದ್ದಾಗ ನಾಪತ್ತೆಯಾಗಿದ್ದಳು. ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದ ಯುವತಿ ನಿನ್ನೆ ಒಬ್ಬಳೇ ಚಾರಣಕ್ಕೆ ತೆರಳಲು ಮುಂದಾಗಿದ್ದಳು. ಆ ಪ್ರದೇಶದಲ್ಲಿ ಕಾಡಾನೆಗಳ ಕಾಟ ಇರುವ ಕಾರಣ ಬೇರೆಯವರ ಜತೆ ಸಿಬ್ಬಂದಿ ಕಳುಹಿಸಿದ್ದರು. ಕೊನೆಯಲ್ಲಿ‌ ನಾಯಿಗಳ‌ಜೊತೆ ಆಟವಾಡುತ್ತಾ ಹಿಂದುಳಿದ ಶರಣ್ಯ ಉಳಿದವರ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದ್ದಳು. ಆದರೆ ಇದೀಗ ಕಳೆದ ನಾಲ್ಕು ದಿನಗಳಿಂದ ದಟ್ಟಾರಣ್ಯದಲ್ಲಿ ಆಹಾರವಿಲ್ಲದೆ, ಕೇವಲ ಒಂದು ಬಾಟಲಿ ನೀರಿನ ಸಹಾಯದಿಂದ ಬದುಕುಳಿದಿದ್ದ ಈ ಸಾಹಸಿ ಯುವತಿ ಇಂದು ನಗುಮೊಗದಲ್ಲೇ ಕಾಡಿನಿಂದ ಹೊರಬಂದಿದ್ದಾರೆ.

ಶರಣ್ಯ ನಾಪತ್ತೆಯಾದ ದಿನದಿಂದಲೂ ಕೊಡಗು ಜಿಲ್ಲಾ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ) ಮತ್ತು ಸ್ಥಳೀಯ ನಿವಾಸಿಗಳು ಹಗಲಿರುಳು ಶೋಧ ನಡೆಸಿದ್ದರು. ಡ್ರೋಣ್, ಥರ್ಮಲ್ ಡ್ರೋಣ್ ಮತ್ತು ಶ್ವಾನ ದಳವನ್ನು ಬಳಸಲಾಗಿತ್ತು. ಕೊನೆಗೆ ಸ್ಥಳೀಯ ನಿವಾಸಿಗಳು ಕಾಡಿನ ಒಂದು ಭಾಗದಲ್ಲಿ ವಿಚಿತ್ರ ಶಬ್ದ ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಶರಣ್ಯ ಪತ್ತೆಯಾಗಿದ್ದಾರೆ. 

ನಾಲ್ಕು ದಿನಗಳ ಕಾಲ ಕಾಡಲ್ಲಿ ಬದುಕುಳಿದಿದ್ದೇಗೆ?

ಕಾಡಿನಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ಯ, ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನಾನು ಆರೋಗ್ಯವಾಗಿದ್ದೇನೆ. ಕಾಡಿನಲ್ಲಿ ದಾರಿ ತಪ್ಪಿದಾಗ ನನ್ನ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಇದ್ದಿದ್ದು ಕೇವಲ ಒಂದು ಬಾಟಲಿ ನೀರು ಮಾತ್ರ. ರಕ್ಷಣಾ ತಂಡವು ನನ್ನನ್ನು ಹುಡುಕಲು ಡ್ರೋಣ್ ಬಳಸಬಹುದು ಎಂದು ನನಗೆ ತಿಳಿದಿತ್ತು. ಹಾಗಾಗಿ ಡ್ರೋಣ್‌ಗೆ ಕಾಣಿಸುವಂತಹ ಬಯಲು ಜಾಗದಲ್ಲೇ ನಾನು ಹೆಚ್ಚಾಗಿ ನಿಂತಿದ್ದೆ’ ಎಂದು ಅವರು ವಿವರಿಸಿದ್ದಾರೆ. 15 ವರ್ಷಗಳ ಚಾರಣದ ಅನುಭವವಿದ್ದ ಕಾರಣ ಅವರು ಕಾಡಿನ ವಿಷಮ ಪರಿಸ್ಥಿತಿಯಲ್ಲೂ ಧೈರ್ಯ ಕಳೆದುಕೊಳ್ಳದೆ ಬದುಕುಳಿದಿದ್ದಾರೆ.