ಕರ್ನಾಟಕದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಯಾರಾದರೂ ಸರ್ಕಾರಿ ಅಧಿಕಾರಿಗಳು ಲಂಚ ಪಡೆದರೆ ಅವರನ್ನು ತಕ್ಷಣ ಅಮಾನತು ಮಾಡಲಾಗುವುದು ಎಂದು ಅಧಿಕಾರಕ್ಕೆ ಬಂದಾಗ ತಿಳಿಸಿದ್ದರು. ಆದರೆ ಇದರ ನಡುವೆಯೇ ಡಿಕೆಶಿ ಸರ್ಕಾರದ ಸಚಿವ ಶಿವಲಿಂಗೇಗೌಡ ಅವರು ಲಂಚ ನೀಡಲು ಪ್ರೋತ್ಸಾಹ ನೀಡುತ್ತಿದ್ದಾರಾ? ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಹೌದು, ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಶಿವಲಿಂಗೇಗೌಡರು ಹಾಸನದ ಪ್ರಜಾಸೇವೆ ಆಂದೋಲನದಲ್ಲಿ ಭಾಗವಹಿಸಿ ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದ ವೇಳೆ ಜನರಿಗೆ “ಅಧಿಕಾರಿಗಳು ನಿಮ್ಮ ಕೆಲಸವನ್ನು ಮಾಡಿಕೊಟ್ಟರೆ ಅವರಿಗೆ ಗೌರವಯುತವಾಗಿ ಏನಾದರೂ ಕೊಡುವುದು ಧರ್ಮ. ಅದು ನಿಮ್ಮ ಇಷ್ಟ ನಿಮಗೆ ಇಷ್ಟವಿದ್ದರೆ ನೀವು ಕೊಡಬಹುದು ಆದರೆ ಬಲವಂತವಾಗಿ ಕಿತ್ತುಕೊಳ್ಳುವಂತಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಇದು ಸಚಿವರು ಲಂಚ ನೀಡಲು ಪ್ರೋತ್ಸಾಹಿಸುತ್ತಿರುವಂತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಸಚಿವರು ಈ ರೀತಿ ಹೇಳುತ್ತಿದ್ದಂತೆ ಸ್ಥಳದಲ್ಲೇ ಇದ್ದ ಕೆಲವು ಸಾರ್ವಜನಿಕರು ಗೌರವಯುತವಾಗಿಯೂ ಕೂಡ ಯಾರಿಗೂ ಯಾರು ಏನನ್ನು ಕೊಡಬಾರದು, ನೀವು ಹೇಳುವುದು ಸರಿಯಲ್ಲ ಎಂದು ವಾದಿಸಿದ್ದಾರೆ. ಇದಕ್ಕೆ ಸಚಿವರು ಅದು ನಿನ್ನಿಷ್ಟ ಕಣಪ್ಪ ಎಂದು ಹೇಳಿದ್ದಾರೆ.



