ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿದ್ದು, ಗ್ರಾಮದಲ್ಲಿ ಕುತೂಹಲ ಮೂಡಿಸಿದೆ.
ಇಂಚಲ ಗ್ರಾಮದ ಬಿಸಿಎಂ ಹಾಸ್ಟೆಲ್ ಸಮೀಪ ವಿಬಿ–ಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕರಿಗೆ ಗಡಿಗೆಯೊಂದು ಸಿಕ್ಕಿದೆ. ಅದನ್ನು ಪರಿಶೀಲಿಸಿದಾಗ ಒಳಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ನಾಣ್ಯಗಳ ಒಟ್ಟು ತೂಕ ಸುಮಾರು 54.8 ಗ್ರಾಂ ಇದ್ದು, ಮೌಲ್ಯವನ್ನು ಸುಮಾರು ₹8.27 ಲಕ್ಷ ಎಂದು ಅಂದಾಜಿಸಲಾಗಿದೆ.
ನಾಣ್ಯಗಳು ಸಿಕ್ಕ ತಕ್ಷಣ ಕಾರ್ಮಿಕರು ಅವುಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ನಾಣ್ಯಗಳನ್ನು ಹಸ್ತಾಂತರಿಸಲಾಗಿದ್ದು, ಬಳಿಕ ಅವುಗಳನ್ನು ಖಜಾನೆಗೆ ಒಪ್ಪಿಸಲಾಗಿದೆ.
ಪತ್ತೆಯಾದ ನಾಣ್ಯಗಳ ಮೇಲೆ ಆನೆಯ ಚಿತ್ರ ಇರುವುದು ವಿಶೇಷ ಗಮನ ಸೆಳೆದಿದೆ. ತಲಕಾಡಿನ ಗಂಗರ ರಾಜಲಾಂಛನ ಆನೆಯಾಗಿದ್ದ ಹಿನ್ನೆಲೆಯಲ್ಲಿ, ನಾಣ್ಯಗಳು ಗಂಗರ ಕಾಲಕ್ಕೆ ಸೇರಿರಬಹುದೆಂದು ಹೇಳಲಾಗುತ್ತಿದೆ. ಆದರೆ ನಾಣ್ಯಗಳ ನಿಖರ ಕಾಲಘಟ್ಟ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಖಚಿತಪಡಿಸಲು ಹೆಚ್ಚಿನ ಪರಿಶೀಲನೆ ಅಗತ್ಯವಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳು ಸಿಕ್ಕರೂ ಅವುಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ ಕೂಲಿ ಕಾರ್ಮಿಕರ ಪ್ರಾಮಾಣಿಕತೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

