ಭಾನುವಾರ, 25 ಅಕ್ಟೋಬರ್ 2026

‘ಸತ್ಯ ಹೇಳಿದ್ರೆ ಪೊಲೀಸರನ್ನು ಮನೆಗೆ ಕಳುಹಿಸುತ್ತೀರಿ’ ಸಂಘ ಪರಿವಾರದ ವಿರುದ್ಧ BJP ಮುಖಂಡ ಕೃಷ್ಣಪ್ಪ ಕಲ್ಲಡ್ಕ ಆರೋಪ

‘ನಾವು ಏನಾದರೂ ಸತ್ಯ ಹೇಳಿದರೆ ಅದಕ್ಕೂ ದೂರು ನೀಡಿ CCB ಪೊಲೀಸರನ್ನು ಮನೆಗೆ ಕಳುಹಿಸುತ್ತೀರಿ’ ಎಂದು ಬಿಜೆಪಿ ನಾಯಕ ಕೃಷ್ಣಪ್ಪ ಕಲ್ಲಡ್ಕ ಅವರು ಆರ್ ಎಸ್ ಎಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Sponsored

 ಬಿ.ಸಿ.ರೋಡ್‌ ನಲ್ಲಿ ನಡೆದ ಪ್ರತಿಭಟನಾ ಸಭೆಯ ಬೆನ್ನಲ್ಲೇ ಸಂಘ ಪರಿವಾರ ಹಾಗೂ ಬಿಜೆಪಿ ಸಂಘಟನೆಯೊಳಗಿನ ಬೆಳವಣಿಗೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕೃಷ್ಣಪ್ಪ ಕಲ್ಲಡ್ಕ, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಮಗೆ ಎಲ್ಲವನ್ನೂ ಸರಿ ಮಾಡಬೇಕೆಂಬ ಮನಸ್ಸಿದ್ದರೆ ಸತ್ಯಜಿತ್‌ ಸುರತ್ಕಲ್ ರಿಗೆ ಮತ್ತು ಅರುಣ್ ಕುಮಾರ್ ಪುತ್ತೂರಿಗೆ ಬಿಜೆಪಿಯಲ್ಲಿ MLA ಟಿಕೆಟ್ ಕೊಡಿ. ಸಂಘ ಹಾಗೂ ಸಂಘಟನೆಯಲ್ಲಿ ದುಡಿದು, ಈಗ ನಮ್ಮಿಂದ ಹೊರಗಿರುವ, ಅನ್ಯಾಯಕ್ಕೆ ಒಳಗಾಗಿರುವ ಹಲವು ನಾಯಕರು, ಕಾರ್ಯಕರ್ತರು ಇದ್ದಾರೆ. ಅವರನ್ನು ಮತ್ತೆ ಒಳಗೆ ತನ್ನಿ. ಈ ಬಗ್ಗೆ ಸಂಘನಿಕೇತನದಲ್ಲಿ ಕುಳಿತು ಒಂದು ಬೈಠಕ್ ಮಾಡಿ. ಸಂಘ ಪರಿವಾರದ ಎಲ್ಲ ನಾಯಕರು ಹಾಗೂ ನಿನ್ನೆ ಮಾತನಾಡಿದ ಎಲ್ಲ ನಾಯಕರಿಗೂ ನನ್ನ ಮನವಿ ಇದು’ ಎಂದು ಹೇಳಿದ್ದಾರೆ.

Marriage AdMarriage AdSponsored

ಬಳಿಕ ಮಾತನಾಡಿದ ಅವರು ‘ಅದನ್ನು ಮಾಡುವುದಿಲ್ಲ. ನಮ್ಮಂತವರನ್ನೆಲ್ಲ ಮಾತನಾಡಿದ ಕೂಡಲೇ ತಕ್ಷಣ ಮುಗಿಸುವುದು, ನಾವೇನಾದರೂ ಸತ್ಯ ಹೇಳಿದರೆ ಅದಕ್ಕೆ ಕೂಡ ದೂರು ನೀಡಿ CCB ಪೊಲೀಸ್ ಕಳಿಸುತ್ತೀರಿ. ಆ ಮಟ್ಟಕ್ಕೆ ಇಳಿಯುವ ಪ್ರಯತ್ನ ಮಾಡುತ್ತಿದ್ದೀರಿ. ನನ್ನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ನಾನು ಸಂಘಟನೆಯಲ್ಲಿ ದುಡಿದದ್ದು ಎಷ್ಟು ಎಂಬುದು ಎಲ್ಲ ಊರಿಗೂ ಗೊತ್ತಿದೆ. ಕರಸೇವಕನಾಗಿ ದುಡಿದೆ, ಸಂಘದ ಜವಾಬ್ದಾರಿ ತೆಗೆದುಕೊಂಡು ವಿಸ್ತಾರಕನಾಗಿ ದುಡಿದೆ, ಬಿಜೆಪಿಯಲ್ಲಿ ದುಡಿದೆ. ಆದರೂ ತಪ್ಪಾದಾಗ ಮಾತನಾಡಿದರೆ CCB ಪೊಲೀಸ್ ದೂರು ಕೊಟ್ಟು ಮನೆಗೆ CCB ಪೊಲೀಸರನ್ನು ಕಳಿಸುತ್ತೀರಿ. ಇದು ನನಗೆ ಇತ್ತೀಚೆಗೆ ಆದ ಘಟನೆ. ಬೇಸರ ಉಂಟಾಗಿದೆ. ಆ ಬೇಸರದಿಂದ ಮಾತನಾಡುತ್ತಿದ್ದೇವೆ’ ಎಂದರು.

ಅಲ್ಲದೆ ‘ಇನ್ನಾದರೂ ಸರಿ ಮಾಡುವ ಕೆಲಸ ಮಾಡಿ. ಅದು ಬಿಟ್ಟು ಎಲ್ಲ ನಮ್ಮಿಂದಲೇ ಆಗುತ್ತದೆ ಅನ್ನುವಂತಹ ಅಹಂಕಾರದ ಭಾಷಣ ಬೇಡ. ಅಹಂಕಾರದ ಭಾಷಣ ಬೇಡ, ಕೇಳಿ ಕೇಳಿ ಸಾಕಾಗಿದೆ. ಯಾರ್ಯಾರು ಭಾಷಣ ಮಾಡಿದ್ದಾರೆ ಅವರೇ ನಮ್ಮನ್ನು ಮುಗಿಸಿದ್ದಾರೆ. ಹಿಂದೂ ಸಮಾಜ ಭಾಷಣದಲ್ಲಿ ಮೇಲೆ ಬರುವುದಿಲ್ಲ’ ಎಂದು ಹೇಳಿದ್ದಾರೆ.

‘ನೀವು ಪ್ರಾರಂಭದಲ್ಲಿ ಮಾಡಬೇಕಾದದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವದ ರಕ್ಷಣೆ ಅಲ್ಲ. ಇಲ್ಲಿ ಹಿಂದುತ್ವ ರಕ್ಷಣೆ ಆಗಿದೆ. ಹಿಂದೂಗಳು ಒಟ್ಟಾಗಿದ್ದಾರೆ. ಇಲ್ಲಿ ಯಾವತ್ತೂ ಬೇರೆ ಆಗುವುದಿಲ್ಲ. ಆದರೆ ನೀವು ಮಾಡಬೇಕಾದದ್ದು ಏನು? ಇವತ್ತು ಎಷ್ಟೋ ವರ್ಷಗಳಿಂದ ಬಿಜೆಪಿ, ಸಂಘ ಪರಿವಾರದಲ್ಲಿ ದುಡಿದಂತಹ ನಳಿನ್ ಕುಮಾರ್ ಕಟೀಲ್ ಅವರನ್ನು ಎಲ್ಲಿ ಇಟ್ಟಿದ್ದೀರಿ? ಹಿಂದುತ್ವಕ್ಕೆ ಪೂರ್ಣ ಸರ್ವಸ್ವವನ್ನು ಕೊಟ್ಟಂತಹ ಸತ್ಯಜಿತ್ ಅವರನ್ನು ಎಲ್ಲಿ ಇಟ್ಟಿದ್ದೀರಿ? ಹಿಂದುತ್ವಕ್ಕೋಸ್ಕರ ಹೋರಾಟ ಮಾಡಿದ ಅರುಣ್ ಕುಮಾರ್ ಪುತ್ತೂರು ಅವರನ್ನು ಎಲ್ಲಿ ಇಟ್ಟಿದ್ದೀರಿ?’ ಎಂದು ಅವರು ಪ್ರಶ್ನಿಸಿದ್ದಾರೆ.

ಇದಲ್ಲದೆ ‘ಮಂಗಳೂರಿನಲ್ಲಿ ರವಿ ಕಾವೂರು ಅಂತ ಇದ್ದರು. ಹಿಂದುತ್ವಕ್ಕೋಸ್ಕರ ಪ್ರಾಣ ಕೊಡಲಿಕ್ಕೆ ರೆಡಿಯಾಗಿದ್ದವರು. ಅದೇ ರೀತಿ ಬೇರೆ ಬೇರೆ ಯುವಕರಿದ್ದಾರೆ. ಹಿಂದೂ ಸಮಾಜದಲ್ಲಿ ಕೆಲಸ ಮಾಡಿದ ಇವರನ್ನು ಸರಿ ಮಾಡಿ. ಇವರನ್ನು ಸಮಾಜದ ಮುಖ್ಯವಾಹಿನಿಗೆ ಮತ್ತೊಮ್ಮೆ ತನ್ನಿ. ಪ್ರತಾಪ್ ಸಿಂಹ ರನ್ನು ಏನು ಮಾಡಿದ್ರು? ಈಶ್ವರಪ್ಪ ರನ್ನು ಏನು ಮಾಡಿದ್ರು? ಅನಂತಕುಮಾರ್ ಹೆಗಡೆ ಅವರನ್ನು ಏನು ಮಾಡಿದ್ರು? ಇಂಥವರನ್ನು ಒಟ್ಟಿಗೆ ಕುಳಿತು ಮಾತನಾಡಿ, ಸಮನ್ವಯ ಸಮಿತಿ ಮಾಡಿಕೊಂಡು, ಇಡೀ ಹಿಂದೂ ಸಮಾಜದ ಎಲ್ಲರನ್ನು ಒಟ್ಟು ಮಾಡುವುದು ಬಿಟ್ಟು, ಎಲ್ಲೋ ಬಂದು ನಮ್ಮ MLA, MPಗಳಿಗೆ ಅವಮಾನ ಮಾಡಿದರೆ, ಅಗೌರವ ಮಾಡಿದರೆ ಇದು ಸರಿಯೇ?’ ಎಂದು ಪ್ರಶ್ನಿಸಿದರು.