ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಕೊಂದ ಪಾಪಿ ಪತಿಯೋರ್ವ ಆಕೆಯ ರುಂಡವನ್ನು ಫ್ರಿಡ್ಜ್ ನಲ್ಲಿಟ್ಟು ಪರಾರಿಯಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಸೆಪ್ಟೆಂಬರ್ 6 ರಂದು, ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.


ಕೊಲೆಯಾದ ದುರ್ದೈವಿ ಮಹಿಳೆಯನ್ನು ರಿಯಾ ತಾಲೂಕ್ದಾರ್ (25) ಎಂದು ಗುರುತಿಸಲಾಗಿದೆ. ಈಕೆಯನ್ನು ಕೊಲೆ ಮಾಡಿದ ಆರೋಪಿ ಆಕೆಯ ಪತಿ ರಾಮಾನುಜನ್ ಗೋಸ್ವಾಮಿ ಎಂದು ಗುರುತಿಸಲಾಗಿದೆ.
ರಿಯಾ ತಾಲೂಕ್ವಾರ್ ಗೋಸ್ವಾಮಿ(25) ಹಾಗೂ ಆಕೆಯ ಪತಿ ರಾಮಾನುಜನ್ ಗೋಸ್ವಾಮಿ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಅವರ ಫೋನ್ ಗಳು ಸ್ವಿಚ್ ಆಫ್ ಆಗಿವೆ ಎಂದು ತಿಳಿಸಿದ್ದರು. ಬಳಿಕ ಪೊಲೀಸರು ಫ್ಲಾಟ್ನ ಬೀಗ ಒಡೆದು ಪ್ರವೇಶಿಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ರುಂಡವಿಲ್ಲದ ರಿಯಾಳ ಶವ ಪತ್ತೆಯಾಗಿದೆ. ಮನೆಯನ್ನು ಶೋಧಿಸಿದಾಗ ತಲೆಯನ್ನು ಪಾಲಿಥಿನ್ ಕವರ್ನಲ್ಲಿ ಸುತ್ತಿ ಫ್ರಿಡ್ಜ್ ಒಳಗೆ ಇಡಲಾಗಿದ್ದು, ಬೆರಳುಗಳು ಕೂಡ ಅರ್ಧಕ್ಕೆ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಪ್ರಕರಣದಲ್ಲಿ ರಿಯಾಳ ಪತಿ ಪ್ರಮುಖ ಆರೋಪಿಯಾಗಿದ್ದಾನೆ. ಭಾನುವಾರ ರಾತ್ರಿ ಆತ ಪೊಲೀಸರ ಮುಂದೆ ಶರಣಾಗಿದ್ದು, ತನ್ನ ಅಪರಾಧ ಒಪ್ಪಿಕೊಂಡಿದ್ದಾನೆ
ಶವ ಪತ್ತೆಯಾಗುವ ಸುಮಾರು 48 ಗಂಟೆಗಳ ಮೊದಲು ಹತ್ಯೆ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ವರದಿಗಳ ಪ್ರಕಾರ, ಆರು ತಿಂಗಳ ಹಿಂದೆ ರಿಯಾ ಮತ್ತು ರಾಮಾನುಜನ್ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. ಕೊಲೆಗೆ ಬಳಸಿದ ಆಯುಧಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹತ್ಯೆಯ ಹಿಂದಿನ ನಿಖರ ಕಾರಣವೇನು ಎಂಬುದನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಅಲ್ಲದೆ, ಆರೋಪಿ ಪೊಲೀಸರಿಗೆ ಶರಣಾಗಲು ಕಾರಣವೇನು ಎಂಬ ಬಗ್ಗೆಯೂ ಯಾವುದೇ ವಿವರ ನೀಡಿಲ್ಲ. ಘಟನೆಗೆ ಸಂಬಂಧಿಸಿದ ಸಂಪೂರ್ಣ ಸರಣಿ, ಹತ್ಯೆಯ ಹಿಂದಿನ ಕಾರಣ ಹಾಗೂ ಪ್ರಕರಣದಲ್ಲಿ ಬೇರೆಯವರ ಪಾತ್ರ ಏನಾದರೂ ಇದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

