ಹನೂರು ಶೂಟೌಟ್ ಪ್ರಕರಣ ಸಿಐಡಿಗೆ ವರ್ಗಾವಣೆ: 4 ಎಫ್‌ಐಆರ್‌ಗಳ ತನಿಖೆ ಚುರುಕು
Sponsoredಚಾಮರಾಜನಗರ: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಕರಣದ ತನಿಖೆಯನ್ನು ಇದೀಗ ಸಿಐಡಿಗೆ ವಹಿಸಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಸಲೀಂ ಅವರ ಆದೇಶದ ಮೇರೆಗೆ ಶೂಟೌಟ್‌ಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಲ್ಕೂ ಎಫ್‌ಐಆರ್‌ಗಳನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ಸಿಐಡಿಯ ವಿಶೇಷ ಘಟಕ ನಡೆಸಲಿದೆ.ಚಾಮರಾಜನಗರ ಎಸ್‌ಪಿಗೆ ಈ ಕುರಿತು ಸೂಚನೆ ನೀಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ತನಿಖಾ ಮಾಹಿತಿಯನ್ನು ಸಿಐಡಿಗೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಲಾಗಿದೆ.
ನಾಲ್ಕು ಪ್ರಕರಣಗಳು ಸಿಐಡಿ ಕೈಗೆ
ಹನೂರು ಶೂಟೌಟ್‌ಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ರಾಮಪುರಂ ಪೊಲೀಸ್ ಠಾಣೆಯಲ್ಲಿ ಒಂದು, ಹನೂರು ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು.ಇದೀಗ ಎಲ್ಲಾ ಪ್ರಕರಣಗಳ ತನಿಖೆಯ ಜವಾಬ್ದಾರಿ ಸಿಐಡಿಗೆ ಬಂದಿದ್ದು, ಗುಂಡಿನ ದಾಳಿ ನಡೆದ ನಿಖರ ಸಂದರ್ಭ, ಫೈರಿಂಗ್‌ಗೆ ಕಾರಣ, ಅರಣ್ಯ ಸಿಬ್ಬಂದಿ ಕೈಗೊಂಡ ಕ್ರಮ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ತನಿಖಾ ತಂಡ ಪರಿಶೀಲಿಸುವ ಸಾಧ್ಯತೆಯಿದೆ.
ಆಗಸ್ಟ್ 14ರಂದು ನಡೆದಿದ್ದ ಘಟನೆ
ಹನೂರು ತಾಲೂಕಿನ ಶಾಗ್ಯ ಸಮೀಪದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಆಗಸ್ಟ್ 14ರಂದು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು. ತೋಮಿಯರ್‌ಪಾಳ್ಯದ ನಿವಾಸಿಗಳಾದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಮೃತಪಟ್ಟವರು ಎಂದು ಗುರುತಿಸಲಾಗಿತ್ತು.ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಾಡುಪ್ರಾಣಿಗಳನ್ನು ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಮೃತರ ನಡುವೆ ಸಂಘರ್ಷ ನಡೆದಿತ್ತು ಎಂದು ಅರಣ್ಯ ಇಲಾಖೆ ತಿಳಿಸಿತ್ತು. ಈ ವೇಳೆ ಫೈರಿಂಗ್ ನಡೆದಿತ್ತು ಎನ್ನಲಾಗಿದೆ. ಆದರೆ ಘಟನೆಗೆ ಸಂಬಂಧಿಸಿದಂತೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ನೀಡಿದ್ದ ವಿವರಣೆ ಹಾಗೂ ಸಾಕ್ಷ್ಯಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು. ಪ್ರಕರಣ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ದೇಶಾದ್ಯಂತ ಗಮನ ಸೆಳೆದಿರುವ ಹನೂರು ಶೂಟೌಟ್ ಪ್ರಕರಣ ಇದೀಗ ಸಿಐಡಿ ತನಿಖೆಗೆ ಒಳಪಟ್ಟಿರುವ ಹಿನ್ನೆಲೆಯಲ್ಲಿ ಘಟನೆಯ ಹಿಂದಿನ ಸಂಪೂರ್ಣ ಸತ್ಯಾಂಶ ಏನು ಎಂಬುದು ತನಿಖೆಯ ಬಳಿಕ ಸ್ಪಷ್ಟವಾಗುವ ನಿರೀಕ್ಷೆಯಿದೆ.




