ಭಾನುವಾರ, 25 ಅಕ್ಟೋಬರ್ 2026
Trending

ಹನೂರು ಎನ್‌ಕೌಂಟರ್‌ ಪ್ರಕರಣಕ್ಕೆ ಟ್ವಿಸ್ಟ್ ; ಮ್ಯಾಜಿಸ್ಟ್ರೇಟ್ ತನಿಖೆ ಆದೇಶ: ಡಿಸಿ ಶ್ರೀರೂಪಾ

ಚಾಮರಾಜನಗರ: ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಮತ್ತು ಶಸ್ತ್ರಸಜ್ಜಿತ ವ್ಯಕ್ತಿಗಳ ನಡುವೆ ನಡೆದ ಗುಂಡಿನ ಚಕಮಕಿ ಪ್ರಕರಣ ಇದೀಗ ತನಿಖೆಯ ಹಂತಕ್ಕೆ ಬಂದಿದೆ. ಘಟನೆಯ ಸಂಪೂರ್ಣ ಸತ್ಯಾಂಶ ತಿಳಿಯಲು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಿ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ ಆದೇಶಿಸಿದ್ದಾರೆ.

Sponsored


ಹನೂರು ವನ್ಯಜೀವಿ ವಲಯದ ಶಾಗ್ಯ ಶಾಖೆಯ ವ್ಯಾಪ್ತಿಯ ಕರದಿಕಲ್ಲು ಒಡ್ಡು ಪ್ರದೇಶದಲ್ಲಿ ಗಸ್ತು ಕಾರ್ಯಾಚರಣೆ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ನಾಡಬಂದೂಕು ಹೊಂದಿದ್ದ ವ್ಯಕ್ತಿಗಳು ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸಿದ ವೇಳೆ ಮೂವರಿಗೆ ಗುಂಡೇಟು ತಗುಲಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯ ಸಂದರ್ಭದಲ್ಲಿ ಏನು ನಡೆದಿದೆ, ಗುಂಡಿನ ದಾಳಿ ಹೇಗೆ ಆರಂಭವಾಯಿತು, ಯಾವ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು ಹಾಗೂ ಅರಣ್ಯ ಸಿಬ್ಬಂದಿ ಕೈಗೊಂಡ ಕ್ರಮಗಳು ನಿಯಮಾನುಸಾರವಾಗಿದ್ದವೆಯೇ ಎಂಬುದನ್ನು ತನಿಖೆಯಲ್ಲಿ ಪರಿಶೀಲಿಸಲಾಗುತ್ತದೆ.
ಈ ಸಂಬಂಧ ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ವಾಸ್ತವಾಂಶವನ್ನು ಪರಿಶೀಲಿಸುವ ಜವಾಬ್ದಾರಿ ನೀಡಲಾಗಿದೆ