ಸೋಮವಾರ, 26 ಅಕ್ಟೋಬರ್ 2026
Trending

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ವಾಪಸ್ ಪಡೆದಿಲ್ಲ- ಯು.ಟಿ. ಖಾದರ್ ಸ್ಪಷ್ಟನೆ

ರಾಜ್ಯದಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧಿಸಿ ಹೊರಡಿಸಲಾದ ಆದೇಶವನ್ನು ಹಿಂಪಡೆದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.

Sponsored

ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಾನ್ ಮಸಾಲದಲ್ಲಿ ನಿಕೊಟಿನ್ ನಿಷೇಧ ಆದೇಶದಿಂದ ಅಡಿಕೆ ಬೆಳೆಗಾರರಿಗೆ ಏನೂ ಸಮಸ್ಯೆ ಆಗುವುದಿಲ್ಲ. ನಾನು ಆ ಆದೇಶವನ್ನು ವಾಪಸ್ ಪಡೆದಿಲ್ಲ. ಪಾನ್ ಮಸಾಲದಲ್ಲಿ ನಿಕೊಟಿನ್ ಇರಬಾರದು ಎಂಬ ಆದೇಶ ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾಡಲಾಗಿದೆ. ಇದರಿಂದಾಗಿ ಅಡಿಕೆಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗುಟ್ಕಾ ತಯಾರಿಕೆಗೆ ನಮ್ಮ ದೇಶದ ಅಡಿಕೆಯನ್ನು ಯಾರೂ ಬಳಕೆ ಮಾಡುವುದಿಲ್ಲ. ಬದಲಿಗೆ ನೇಪಾಳ ಮತ್ತು ಬಾಂಗ್ಲಾದೇಶದಿಂದ ಆಮದು ಮಾಡಿಕೊಳ್ಳುವ ಅಡಿಕೆಯನ್ನು ಬಳಸಲಾಗುತ್ತದೆ. ಈ ಹಿಂದೆ ಗುಟ್ಕಾ ನಿಷೇಧಿಸಿದಾಗಲೂ ಅಡಿಕೆ ಬೆಲೆ ಕುಸಿಯುತ್ತದೆ ಎಂಬ ಆತಂಕವಿತ್ತು. ಆದರೆ ನಿಷೇಧದ ಮೂರು ತಿಂಗಳ ಬಳಿಕ ಅಡಿಕೆ ಬೆಲೆ ಗಣನೀಯವಾಗಿ ಹೆಚ್ಚಾಗಿತ್ತು. ಪ್ರಸ್ತುತ ನಿಕೋಟಿನ್ ನಿಷೇಧದ ನಿರ್ಧಾರದಿಂದಲೂ ಅಡಿಕೆ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆಯೇ ವಿನಃ ಕುಸಿಯುವುದಿಲ್ಲ” ಎಂದು ಸಚಿವರು ಹೇಳಿದ್ದಾರೆ.

ಅಲ್ಲದೆ ನಮ್ಮ ಇಲಾಖೆ, ಸರ್ಕಾರ ಅಡಿಕೆ ಬೆಳೆಗಾರರಿಗೆ, ರೈತರಿಗೆ, ವ್ಯಾಪಾರಿಗಳಿಗೆ ಸಂಪೂರ್ಣ ಬೆಂಬಲ, ಪ್ರೋತ್ಸಾಹ ನೀಡುತ್ತದೆ. ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುವ ಕೆಲಸ ಹಿಂದೆಯೂ ಮಾಡಿಲ್ಲ, ಈಗಲೂ ಮಾಡಲ್ಲ, ಮುಂದೆನೂ ಮಾಡುವುದಿಲ್ಲ. ಅಡಿಕೆ ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಈ ತೀರ್ಮಾನದಿಂದ ಬೆಲೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಮೂರು ತಿಂಗಳು ಸಮಯಾವಕಾಶ ಕೊಟ್ಟು ನೋಡಿ. ಸಿಎಂ ಅವರು ಈ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ಸಿಎಂಗೆ ಅದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಆರೋಗ್ಯ ದೃಷ್ಟಿಯಿಂದ ಇದು ಉತ್ತಮ ತೀರ್ಮಾನ ಅಂದಿದ್ದಾರೆ. ಸಿಎಂ ಬೆಳೆಗಾರರಿಗೆ ಯಾವುದೇ ತೊಂದರೆ ಆಗಬಾರದು ಎಂದು ತಿಳಿಸಿದ್ದಾರೆ. ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗಲ್ಲ. ಮೂರು ತಿಂಗಳ ಬಳಿಕ ಅದರ ಫಲಿತಾಂಶ ನೋಡಿ. ನಾನು ಆದೇಶ ಮಾಡಿದ್ದು ಮಾತ್ರ. ಅದನ್ನು ವಾಪಸು ಪಡೆದಿಲ್ಲ ಎಂದರು.