ಶನಿವಾರ, 24 ಅಕ್ಟೋಬರ್ 2026

ಮಹಿಳಾ ನೌಕರರಿಗೆ ಸಿಹಿಸುದ್ದಿ: ʼಋತುಸ್ರಾವ ರಜೆʼ ಕಡ್ಡಾಯ, ಸರಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

High Court

ಬೆಂಗಳೂರು, ಎ16: ಕರ್ನಾಟಕ ಹೈಕೋರ್ಟ್‌ ಮಹಿಳೆಯರ ಆರೋಗ್ಯ ಮತ್ತು ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಐತಿಹಾಸಿಕ ತೀರ್ಪನ್ನು ನೀಡಿದೆ. 18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ʼಋತುಸ್ರಾವ ರಜೆʼ ನೀತಿಯನ್ನು ರಾಜ್ಯ ಸರಕಾರವು ಜಾರಿಗೆ ತರಬೇಕು ಎಂದು ಕೋರ್ಟ್‌ ನಿರ್ದೇಶಿಸಿದೆ.

ನೋಂದಾಯಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ 18 ರಿಂದ 52 ವರ್ಷದೊಳಗಿನ ಎಲ್ಲಾ ಮಹಿಳಾ ನೌಕರರಿಗೆ ಈ ರಜೆ ಅನ್ವಯವಾಗುತ್ತದೆ. ಶಾಶ್ವತ, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ಈ ವಿಸ್ತರಣೆ ಮಾಡಬೇಕು ಎಂದು ಹೇಳಿದೆ.ಕೇವಲ ಸಾಫ್ಟ್‌ವೇರ್ ಅಥವಾ ದೊಡ್ಡ ಕಂಪನಿಗಳಲ್ಲದೆ, ಹೋಟೆಲ್ ಕೆಲಸಗಾರರು, ದಿನಗೂಲಿ ನೌಕರರು ಸೇರಿದಂತೆ ಅಸಂಘಟಿತ ವಲಯದ ಮಹಿಳೆಯರಿಗೂ ಈ ಸೌಲಭ್ಯ ತಲುಪುವಂತೆ ಮಾರ್ಗಸೂಚಿಗಳನ್ನು ಹೊರಡಿಸಲು ಸರ್ಕಾರಕ್ಕೆ ಸೂಚಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿಯ ಹೋಟೆಲ್ ನೌಕರರೊಬ್ಬರು ತಮಗೆ ರಜೆ ನೀಡುತ್ತಿಲ್ಲ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ. ಕೆಲವು ಉದ್ಯೋಗದಾತರ ಸಂಘಟನೆಗಳು ಈ ನೀತಿಯನ್ನು ವಿರೋಧಿಸಿದ್ದರೂ, ಮಹಿಳೆಯರ ಜೈವಿಕ ಅಗತ್ಯತೆಗಳನ್ನು ಗೌರವಿಸುವುದು ಸಮಾನತೆಯ ಸಂಕೇತ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.