ಶಿವಮೊಗ್ಗ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಬಹುತೇಕ ಶಾಲೆಗಳಿಗೆ ಈಗಾಗಲೇ ಪಠ್ಯಪುಸ್ತಕಗಳನ್ನು ತಲುಪಿಸಲಾಗಿದ್ದು, ಇದೇ ಮೊದಲ ಬಾರಿಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ನೀಡಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಾದ ಹಿನ್ನೆಲೆಯಲ್ಲಿ ಪುಸ್ತಕಗಳ ಕೊರತೆ ಎದುರಾದರೆ, ಹೆಚ್ಚುವರಿ ಪಠ್ಯಪುಸ್ತಕಗಳನ್ನು ಕೂಡಲೇ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಇನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟದ ಬಗ್ಗೆಯೂ ಇಲಾಖೆ ಗಮನ ಹರಿಸಿದೆ. ಅಳತೆ ಸರಿಯಾಗದಿದ್ದರೆ ಅವುಗಳನ್ನು ಬದಲಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾಮಗ್ರಿಗಳ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ಎಚ್ಚರಿಕೆ ನೀಡಿದರು.
ಸಮವಸ್ತ್ರ, ಶೂ-ಸಾಕ್ಸ್, ಬಿಸಿಯೂಟ, ಹಾಲು ಹಾಗೂ ಮೊಟ್ಟೆ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳು ಅರ್ಹ ವಿದ್ಯಾರ್ಥಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.



