ಶನಿವಾರ, 24 ಅಕ್ಟೋಬರ್ 2026

ಹೆಂಡ್ತಿ ಮೇಲೆ ಕಣ್ಣಿಡಲು ಬೆಡ್‌ರೂಂನಲ್ಲೂ ಸಿಸಿಟಿವಿ ಇಟ್ಟ ಡಾಕ್ಟರ್‌ ಗಂಡ!

ಮುಂಬೈ: ಮದುವೆಯಾಗಿ ಕೇವಲ 48 ದಿನಗಳನ್ನು ಕಳೆದಿದ ನವವಧುವೊಬ್ಬಳು ಗಂಡನ ಮನೆಯಲ್ಲಿ ಸಾವಿಗೀಡಾದ ಘಟನೆ ನಡೆದಿದೆ. ಮುಂಬೈ ಸಮೀಪದ ಅಂಬರ್‌ನಾಥ್‌ನಲ್ಲಿ ಈ ಘಟನೆ ನಡೆದಿದೆ. ಗಂಡ ವರದಕ್ಷಿಣೆ ವಿಚಾರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದು, ಹಿಂಸೆ ತಾಳಲಾರದೆ 26 ವರ್ಷದ ವಿಶಾಖಾ ತಿಲ್ಕರ್‌ ಆ*ತ್ಮ*ಹ*ತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಈ ಪ್ರಕರಣ ಸಂಬಂಧ ಪತಿ ಡಾಕ್ಟರ್‌ ನಿತಿನ್‌ ತಿಲ್ಕರ್‌ನನ್ನು ಬಂಧನ ಮಾಡಿದ್ದಾರೆ.

ಕಳೆದ ಎಪ್ರಿಲ್‌ 30 ರಂದು ವಿಶಾಖಾ ಮತ್ತು ಡಾ.ನಿತಿನ್‌ ತಿಲ್ಕರ್‌ ಮದುವೆಯಾಗಿತ್ತು. ಮದುವೆಗೆ ಮೊದಲು ಎಲ್ಲವೂ ಚೆನ್ನಾಗಿತ್ತು. ಆದರೆ ಮದುವೆ ಸಮಯದಲ್ಲಿ ತಾವು ನಿರೀಕ್ಷೆ ಮಾಡಿದಷ್ಟು ಉಡುಗೊರೆ ಗೌರವ ದೊರಕಲಿಲ್ಲ ಎಂಬ ಆರೋಪವನ್ನು ಹಾಕಿ ಗಂಡನ ಮನೆಮಂದಿ ವಿಶಾಖಾ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ಕುಟುಂಬದವರು ದೂರಿದ್ದಾರೆ.

ಆಕೆಯ ಪ್ರತಿಯೊಂದು ಚಲನವಲನವನ್ನು ಗಮನಿಸಲು ಪತಿ ನಿತಿನ್‌, ಮನೆಯೊಳಗೆ ಮತ್ತು ಹೊರಗೆ ಹಲವು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ. ಇದರಿಂದ ವಿಶಾಖಾ ತನ್ನ ಸಂಪೂರ್ಣ ಖಾಸಗಿತನವನ್ನು ಕಳೆದುಕೊಂಡು, ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಸಂಬಂಧಿಕರು ಪೊಲೀಸರಿಗೆ ಹೇಳಿದ್ದಾರೆ.

ಮನೆಯಲ್ಲಿ ವಿಶಾಖಾ ಯಾರ ಜೊತೆ ಮಾತನಾಡುತ್ತಾಳೆ, ಏನು ಮಾಡುತ್ತಾಳೆ ಎನ್ನುವುದನ್ನು ನಿತಿನ್‌ ಕ್ಯಾಮೆರಾಗಳ ಮೂಲಕ ನೋಡುತ್ತಿದ್ದ. ಮನೆಯ ಹೊರಗೆ ಯಾರ ಜೊತೆಗಾದರೂ ಮಾತನಾಡಿದರೆ ಸಾಕು ನಂತರ ಆಕೆಗೆ ಕಾದಿರುತ್ತಿದ್ದುದು ಭೀಕರ ಹಲ್ಲೆ.

ಆ*ತ್ಮ*ಹ*ತ್ಯೆ ಮಾಡಿಕೊಳ್ಳುವ ಎರಡು ದಿನಗಳ ಹಿಂದೆ, ಅಕ್ಕಪಕ್ಕದ ಮಹಿಳೆಯೊಬ್ಬರ ಜೊತೆ ಮಾತನಾಡಿದ್ದಕ್ಕೆ ಪತಿ ಬರ್ಬರವಾಗಿ ಥಳಿಸಿದ್ದ ಎಂದು ಕುಟುಂಬದವರು ಹೇಳಿದ್ದಾರೆ. ತಾನು ಅನುಭವಿಸುವ ಹಿಂಸೆಯ ಕುರಿತು ವಿಶಾಖಾ ತನ್ನ ತಾಯಿಗೆ ಫೋನ್‌ ಮಾಡಿ ಅಳುತ್ತಾ ಹೇಳಿದ್ದಳು. ಮಗಳ ಸಂಕಷ್ಟ ಅರಿತ ಪೋಷಕರು ಆಕೆಯನ್ನು ಕರೆತರುವ ವ್ಯವಸ್ಥೆ ಮಾಡುತ್ತಿರುವಾಗಲೇ ವಿಶಾಖಾ ನೇಣು ಬಿಗಿದು ಸಾವಿಗೀಡಾಗಿದ್ದಾರೆ.