ಭಾನುವಾರ, 25 ಅಕ್ಟೋಬರ್ 2026
Trending

ಆನ್‌ಲೈನ್‌ನಲ್ಲಿ ವಿಷಕಾರಿ ದತ್ತೂರಿ ಮಾರಾಟ: ಅಮೆಜಾನ್, ಸ್ವಿಗ್ಗಿ, ಬಿಗ್‌ಬಾಸ್ಕೆಟ್‌ ಲೈಸೆನ್ಸ್ ಅಮಾನತು

ಬೆಂಗಳೂರು: ವಿಷಕಾರಿ ದತ್ತೂರಿ ಹಣ್ಣು ಹಾಗೂ ಬೀಜಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಹಾಗೂ ಬಿಗ್‌ಬಾಸ್ಕೆಟ್‌ ಸಂಸ್ಥೆಗಳ ಆಹಾರ ಪರವಾನಗಿಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ದತ್ತೂರಿ ಹಣ್ಣು ಹಾಗೂ ಬೀಜಗಳಲ್ಲಿ ವಿಷಕಾರಿ ಅಂಶಗಳಿರುವುದರಿಂದ ಅವುಗಳ ಬಳಕೆ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಆದರೂ, ಇವುಗಳನ್ನು ಆನ್‌ಲೈನ್‌ ವೇದಿಕೆಗಳಲ್ಲಿ ಆಹಾರ ಉತ್ಪನ್ನಗಳ ರೂಪದಲ್ಲಿ ಪಟ್ಟಿ ಮಾಡಿ ಗ್ರಾಹಕರಿಗೆ ಪೂರೈಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ ಕೆಲವು ದತ್ತೂರಿ ಉತ್ಪನ್ನಗಳ ಪ್ಯಾಕೆಟ್‌ಗಳಲ್ಲಿ FSSAI ನೋಂದಣಿ ಅಥವಾ ಪರವಾನಗಿ ಸಂಖ್ಯೆಗಳು ನಮೂದಿಸಿರುವುದು ಕಂಡುಬಂದಿದೆ. ಅಲ್ಲದೆ, ಈ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿ ಪ್ಯಾಕಿಂಗ್‌ ಮಾಡಿ ಗ್ರಾಹಕರಿಗೆ ಕಳುಹಿಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಸಂಸ್ಥೆಗಳಿಗೂ ಆಹಾರ ಸುರಕ್ಷತಾ ಇಲಾಖೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿತ್ತು. ಆದರೆ, ಅಮೆಜಾನ್‌ ನಿಗದಿತ ಅವಧಿಯಲ್ಲಿ ಯಾವುದೇ ಉತ್ತರ ನೀಡಿಲ್ಲ ಎಂದು ಇಲಾಖೆ ತಿಳಿಸಿದೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಉತ್ತರ ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಕೇಳಿದ್ದರೆ, ಬಿಗ್‌ಬಾಸ್ಕೆಟ್‌ ದತ್ತೂರಿ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿರುವುದಾಗಿ ಸ್ಪಷ್ಟಪಡಿಸಿತ್ತು.
ಸಂಸ್ಥೆಗಳ ಸ್ಪಷ್ಟೀಕರಣಗಳು ಸಮರ್ಪಕವಾಗಿಲ್ಲ ಎಂದು ಪರಿಗಣಿಸಿದ ಇಲಾಖೆ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಲೈಸೆನ್ಸ್‌ ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದೆ.
ಇದರೊಂದಿಗೆ ದತ್ತೂರಿ ಹಣ್ಣು ಹಾಗೂ ಬೀಜಗಳನ್ನು ಪೂರೈಸುತ್ತಿದ್ದ ಮಾರಾಟಗಾರರು ಮತ್ತು ಪೂರೈಕೆದಾರರ ಬಗ್ಗೆಯೂ ತನಿಖೆ ಮುಂದುವರಿಸಲಾಗಿದೆ. ಆನ್‌ಲೈನ್‌ ವೇದಿಕೆಗಳಲ್ಲಿರುವ ದತ್ತೂರಿ ಉತ್ಪನ್ನಗಳ ಜಾಹೀರಾತು ಹಾಗೂ ಲಿಸ್ಟಿಂಗ್‌ಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಸಂಸ್ಥೆಗಳು ಇಲಾಖೆಯ ಸೂಚನೆಗಳನ್ನು ಪಾಲಿಸಿರುವ ಬಗ್ಗೆ ಅನುಸರಣೆ ವರದಿ ಸಲ್ಲಿಸಿದ ಬಳಿಕ, ಅಮಾನತು ಮುಂದುವರಿಸಬೇಕೇ ಅಥವಾ ಲೈಸೆನ್ಸ್‌ ಮರುಸ್ಥಾಪಿಸಬೇಕೇ ಎಂಬ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

Sponsored