ಭಾನುವಾರ, 25 ಅಕ್ಟೋಬರ್ 2026
Trending

ತಿಮ್ಮಪ್ಪನ ಮೊದಲ ‘ಕರ್ನಾಟಕ ಆರತಿ’ಗೆ ಹೊಸ ರೂಲ್ಸ್ ತರಲು ಡಿಕೆಶಿ ಸಿದ್ಧತೆ – ಸಿಡಿದೆದ್ದ ಟಿಟಿಡಿ

ದೇಶದ ಅತ್ಯಂತ ಪ್ರಮುಖ ಧಾರ್ಮಿಕ ಹಾಗೂ ಶ್ರೀಮಂತ ಪುಣ್ಯಕ್ಷೇತ್ರವೆನಿಸಿರುವ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಪ್ರತಿದಿನ ಮುಂಜಾನೆ ನಡೆಯುವ ವಿಶೇಷ ಸೇವೆಗಳಲ್ಲಿ ಒಂದಾದ ಮೊದಲ ಆರತಿ ಕರ್ನಾಟಕದ ಹೆಸರಿನಲ್ಲಿ ಸಲ್ಲಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ‘ಕರ್ನಾಟಕ ಆರತಿ’ ಎಂದು ಕರೆಯಲಾಗುತ್ತದೆ. ಆದ್ರೆ ಈ ಆರತಿಗೆ ಕರ್ನಾಟಕ ಡಿಕೆ ಶಿವಕುಮಾರ್ ಅವರು ಹೊಸ ರೂಲ್ಸ್ ತರಲು ಮುಂದಾಗಿದ್ದು, ಇದಕ್ಕೆ TTD ಆಕ್ರೋಶ ವ್ಯಕ್ತಪಡಿಸಿದೆ.

Sponsored

ತಿರುಮಲದಲ್ಲಿ ತಿಮ್ಮಪ್ಪನಿಗೆ ಸಲ್ಲುವ ಕರ್ನಾಟಕದ ಹೆಸರಿನ ಮೊದಲ ಆರತಿಯನ್ನು ಸ್ವೀಕರಿಸಲು ಒಬ್ಬರು ಅಲ್ಲಿ ವಿಶೇಷವಾದ ಅಧಿಕಾರಿ ಇರುತ್ತಿದ್ದರು. ಇವರು ರಾಜ್ಯ ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿದ್ದರು. ಆದರೆ ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಪರವಾಗಿ ತಿರುಮಲಕ್ಕೆ ಭೇಟಿ ನೀಡುವ ಸಚಿವರು, ಶಾಸಕರು, ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು, ನ್ಯಾಯಮೂರ್ತಿಗಳು, ಇತರ ಅರ್ಹ ಗಣ್ಯರು ಅಧಿಕೃತವಾಗಿ ಮೊದಲ ಆರತಿ ಸ್ವೀಕರಿಸುವ ಅವಕಾಶ ಪಡೆಯಲಿದ್ದಾರೆ ಎಂದು ಹೊಸ ನಿಯಮವನ್ನು ತರಲು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿಯು ಸಿಡಿದೆದ್ದಿದೆ.

 

ತಿರುಪತಿ ದೇವಸ್ಥಾನದ ವ್ಯವಹಾರಗಳನ್ನು ನೋಡಿಕೊಳ್ಳುವ ಟಿಟಿಡಿ ಮಂಡಳಿಯ ಸದಸ್ಯ ಭಾನು ಪ್ರಕಾಶ್ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಅತ್ಯಂತ ಪವಿತ್ರವಾದ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ತಿರುಪತಿಯನ್ನು ರಾಜಕೀಯ ಕ್ಷೇತ್ರವನ್ನಾಗಿ ಮಾಡಬೇಡಿ. ಆರತಿಯ ಪ್ರಸ್ತುತ ಪ್ರೋಟೋಕಾಲ್‌ಗಳನ್ನು ನಿಮಗಾಗಿ ಬದಲಾಯಿಸಲಾಗುವುದಿಲ್ಲ,’ ಎಂದು ಹೇಳುವ ಮೂಲಕ ಕರ್ನಾಟಕದ ಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

 ಈ ಬಗ್ಗೆ ಮಾತನಾಡಿದ ಅವರು ‘ತಿರುಪತಿಯಲ್ಲಿ ಬೆಳಗಿನ ಪ್ರಥಮ ಆರತಿಯ ಗೌರವವು ಮೈಸೂರು ಮಹಾರಾಜರ ಕುಟುಂಬಕ್ಕೆ ಇರುವ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಹಕ್ಕಾಗಿದೆ. ಆ ಸಂಸ್ಥಾನವು ನೀಡಿದ ಅಪಾರ ಕೊಡುಗೆ ಮತ್ತು ದಾನ ಧರ್ಮಗಳನ್ನು ಗೌರವಿಸಿ ಈ ವಿಶೇಷ ಸೌಲಭ್ಯವನ್ನು ಮೈಸೂರು ಅರಸರಿಗೆ ಮತ್ತು ಅವರ ಪ್ರತಿನಿಧಿಗಳಿಗೆ ನೀಡಿತ್ತು. 1956ರಲ್ಲಿ ಕರ್ನಾಟಕ ಏಕೀಕರಣದ ಬಳಿಕ ರಾಜ್ಯ ಸರ್ಕಾರದ ಒಬ್ಬ ವಿಶೇಷ ಪ್ರತಿನಿಧಿಗೆ ಮಾತ್ರ ಇದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಈ ಸಾಂಪ್ರದಾಯವನ್ನು ಕರ್ನಾಟಕ ಸರ್ಕಾರದ ಶಿಫಾರಸ್ಸಿನ ಮೇರೆಗೆ ಅಲ್ಲಿನ ರಾಜಕಾರಣಿಗಳಿಗೆ, ಶಾಸಕರಿಗೆ ಅಥವಾ ಅಧಿಕಾರಿಗಳಿಗೆ ವಿಸ್ತರಿಸಲು ಸಾಧ್ಯವೇ ಇಲ್ಲ. ಕರ್ನಾಟಕದ ಸಚಿವ ಸಂಪುಟವಾಗಲಿ ಅಥವಾ ಸರ್ಕಾರವಾಗಲಿ ಆಂಧ್ರಪ್ರದೇಶದಲ್ಲಿರುವ ಟಿಟಿಡಿ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ,’ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

‘ಈ ಪ್ರಸ್ತಾವನೆಯು ಟಿಟಿಡಿ ನಿಯಮಗಳು ಹಾಗೂ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಇದನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದನ್ನು ಟಿಟಿಡಿ ಟ್ರಸ್ಟ್ ಬೋರ್ಡ್ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿ ಕರ್ನಾಟಕ ಸರ್ಕಾರದ ಈ ಪ್ರಸ್ತಾವನೆಯನ್ನು ತಿರಸ್ಕರಿಸುವ ಕುರಿತು ನಿರ್ಣಯ ಕೈಗೊಳ್ಳಲಾಗುವುದು,’ ಎಂದು ಭಾನುಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ. ಒಟ್ಟಿನಲ್ಲಿ ತಿರುಪತಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಇದನ್ನು ರಾಜಕೀಯ ಕ್ಷೇತ್ರ ಮಾಡಬೇಡಿ. ಇದೆಲ್ಲಾ ಏನೇ ಇದ್ದರೂ ನಿಮ್ಮ ರಾಜ್ಯದಲ್ಲಿ ಇಟ್ಟುಕೊಳ್ಳಿ. ಇಲ್ಲಿ ಡಿಕೆಶಿ ಹೇಳಿದಂತೆ ನಡೆಯಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಇದು ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.