ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ತೋಟದ ಕೆಲಸ ಮಾಡಿ ನದಿಯಲ್ಲಿ ಕೈ ಕಾಲು ತೊಳೆಯಲೆಂದು ನದಿಯ ದಡಕ್ಕೆ ಬಂದ 12 ವರ್ಷದ ಬಾಲಕನನ್ನು ಬೃಹತ್ ಮೊಸಳೆಯೊಂದು ಎಳೆದೊಯ್ದು ತಿಂದು ತೇಗಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
Sponsoredಮೂಲಗಳ ಪ್ರಕಾರ ಬಹ್ರೈಚ್ ಜಿಲ್ಲೆಯ ಬೌಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಟಿಕುರಿ ಗ್ರಾಮದಲ್ಲಿ ಈ ಭೀಕರ ದುರಂತ ನಡೆದಿದ್ದು, ಗುರುವಾರ ಮಧ್ಯಾಹ್ನ ಬಾಲಕ ತನ್ನ ಚಿಕ್ಕಪ್ಪನ ಜೊತೆ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ಹೋಗಿದ್ದನು. ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಗದ್ದೆಯಲ್ಲಿ ಕೆಲಸ ಮಾಡಿದ ಬಳಿಕ, ಸಂಜೆ ಮನೆಗೆ ಹಿಂದಿರುಗುವಾಗ ಘಾಗರಾ ನದಿಯಲ್ಲಿ ಕೈ-ಕಾಲು ತೊಳೆಯಲು ಇಳಿದಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ನದಿಯಿಂದ ಏಕಾಏಕಿ ಮೊಸಳೆಯೊಂದು ಬಾಲಕನ ಕಾಲನ್ನು ಕಚ್ಚಿ ಹಿಡಿದು ನೀರಿಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಆತನ ಚಿಕ್ಕಪ್ಪ ಕೂಡಲೇ ಬೊಬ್ಬೆ ಹಾಕಿದ್ದಾರೆ. ಅವರ ಕಿರುಚಾಟ ಕೇಳಿ ಅಕ್ಕಪಕ್ಕದ ಗದ್ದೆಯಲ್ಲಿದ್ದ ರೈತರು ಹಾಗೂ ಗ್ರಾಮಸ್ಥರು ಓಡಿಬಂದಿದ್ದಾರೆ. ಮೊಸಳೆಯಿಂದ ಬಾಲಕನನ್ನು ಬಿಡಿಸಲು ಅದರ ಮೇಲೆ ಕಲ್ಲು ಹಾಗೂ ಇಟ್ಟಿಗೆಗಳನ್ನು ಎಸೆದು ಪ್ರಯತ್ನಪಟ್ಟಿದ್ದಾರೆ. ಮೊಸಳೆಯು, ಬಾಲಕನನ್ನು ನೀರಿನಲ್ಲಿಯೇ ಹಲವು ಬಾರಿ ಅತ್ತಿಂದಿತ್ತ ಅಪ್ಪಳಿಸಿ ನೋಡನೋಡುತ್ತಿದ್ದಂತೆಯೇ ಆಳವಾದ ನೀರಿನತ್ತ ಎಳೆದುಕೊಂಡು ಹೋಗಿದೆ.
ಘಟನೆಯ ಬಳಿಕ ತಕ್ಷಣವೇ ಪೊಲೀಸರು ಹಾಗೂ ಸ್ಥಳೀಯರ ನೆರವಿನೊಂದಿಗೆ ಶೋಧ ಕಾರ್ಯಾಚರಣೆ ನಡೆಸಲಾಯಿತು. ಬಳಿಕ ಸುಮಾರು 5 ಗಂಟೆಗಳ ಕಾರ್ಯಾಚರಣೆಯ ಬಳಿಕ ಬಾಲಕನ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಗದ್ದೆ ಕೆಲಸಕ್ಕೆ ಹೋಗಿದ್ದ ಬಾಲಕ ಹೆಣವಾಗಿ ಮರಳಿದ್ದನ್ನು ಕಂಡು ಪೋಷಕರು ಕಣ್ಣೀರು ಹಾಕುತ್ತಿದ್ದು, ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.




