ಶನಿವಾರ, 24 ಅಕ್ಟೋಬರ್ 2026

ಆಸ್ತಿ ಸಮನಾಗಿ ಹಂಚಿ ಎಂದು ತಂದೆಯ ಮೃತದೇಹವನ್ನೇ ತಹಶೀಲ್ದಾರ್ ಕಚೇರಿಗೆ ತಂದ ಮಕ್ಕಳು!!

ಆಸ್ತಿ ಹಂಚಿಕೆಯ ವಿಚಾರವಾಗಿ ಜಗಳ ನಡೆದು ಸಮಾನವಾಗಿ ಆಸ್ತಿಯನ್ನು ಹಂಚಕೆಯಾಗಬೇಕೆಂದು ತಂದೆಯ ಮೃತ ದೇಹವನ್ನು ಮಕ್ಕಳು ತಹಶೀಲ್ದಾರ್ ಕಚೇರಿಗೆ ತೆಗೆದುಕೊಂಡು ಬಂದಂತಹ ಅಘಾತಕಾರಿ ಘಟನೆ ಒಂದು ಬಾಗಲಕೋಟೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಜಮಖಂಡಿ ನಿವಾಸಿ ಯಲ್ಲಪ್ಪ ವಾಗೆನ್ನವರ ಎಂದು ಗುರುತಿಸಲಾಗಿದೆ. ಯಲ್ಲಪ್ಪ ಅವರಿಗೆ ಇಬ್ಬರು ಪತ್ನಿಯರಿದ್ದು, ಎರಡೂ ಕುಟುಂಬಗಳ ಮಕ್ಕಳ ನಡುವೆ ಆಸ್ತಿ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಜಮಖಂಡಿ ಪಟ್ಟಣದ ಹೊರವಲಯದಲ್ಲಿರುವ ಸುಮಾರು 2 ಎಕರೆ 17 ಗುಂಟೆ ಜಮೀನು ವಿವಾದಕ್ಕೆ ಕೇಂದ್ರಬಿಂದುವಾಗಿದೆ.

ಯಲ್ಲಪ್ಪ ವಾಗೆನ್ನವರ ಅವರು ತಮ್ಮ ಹೆಸರಿನಲ್ಲಿದ್ದ ಜಮೀನನ್ನು ತೌಸಿಕ್ ಪಾರ್ತಹಳ್ಳಿ ಎಂಬುವರ ಹೆಸರಿಗೆ ವರ್ಗಾವಣೆ ಮಾಡಿರುವ ಆರೋಪ ಕೇಳಿಬಂದಿದೆ. ಸೆಪ್ಟೆಂಬರ್ 5ರಂದು ಜಮೀನಿನ ಖರೀದಿ ಪತ್ರ ಮಾಡಿಕೊಡಲಾಗಿದ್ದು, ಮರುದಿನವೇ ಯಲ್ಲಪ್ಪ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬೆಳವಣಿಗೆ ಕುಟುಂಬದಲ್ಲಿ ಮತ್ತಷ್ಟು ಅನುಮಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಆಸ್ತಿ ಹಕ್ಕಿನ ವಿಚಾರ ಬಗೆಹರಿಯದ ಹಿನ್ನೆಲೆಯಲ್ಲಿ ತಂದೆಯ ಅಂತ್ಯಸಂಸ್ಕಾರ ನಡೆಸದೆ ಕುಟುಂಬಸ್ಥರು ಮೃತದೇಹವನ್ನು ಜಮಖಂಡಿ ಎಸಿ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದರು. “ನಮಗೆ ಯಾವುದೇ ಮಾಹಿತಿ ನೀಡದೆ ಆಸ್ತಿಯನ್ನು ಹೇಗೆ ವರ್ಗಾವಣೆ ಮಾಡಲಾಗಿದೆ? ನಮಗೂ ಆಸ್ತಿಯಲ್ಲಿ ಹಕ್ಕು ಇದೆ” ಎಂದು ಅಧಿಕಾರಿಗಳ ಮುಂದೆ ಕುಟುಂಬಸ್ಥರು ಪ್ರಶ್ನಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮೊರೆ ಹೋಗುವಂತೆ ಕುಟುಂಬಸ್ಥರಿಗೆ ಸಲಹೆ ನೀಡಿದ್ದಾರೆ. ಅಧಿಕಾರಿಗಳ ಸೂಚನೆಯ ಬಳಿಕ ಕುಟುಂಬಸ್ಥರು ಪ್ರತಿಭಟನೆ ಹಿಂಪಡೆದು, ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.ತಂದೆಯ ಮೃತದೇಹದೊಂದಿಗೆ ಆಸ್ತಿ ಹಕ್ಕಿಗಾಗಿ ಕುಟುಂಬಸ್ಥರು ಸರ್ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಇದೀಗ ಜಮಖಂಡಿಯಲ್ಲಿ ಗಮನ ಸೆಳೆದಿದೆ.