ಉಳಿಯಲು ಸರಿಯಾದ ಸೂರಿಲ್ಲದೆ ಪರದಾಡುತ್ತಿದ ಬಡ ಮಹಿಳೆಯೊಬ್ಬಳಿಗೆ ಸುಸಜ್ಜಿತ ಮನೆಯೊಂದನ್ನ ನಿರ್ಮಿಸಿಕೊಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಮಾನವೀಯತೆ ಮೆರೆದಿದೆ. ಈ ಮೂಲಕ ನಾಡಿನ ಎಲ್ಲಾ ಸಂಘ, ಸಂಸ್ಥೆ, ಸಮಿತಿಗಳಿಗೆ ಮಾದರಿಯಾಗಿದೆ.


ಹೌದು, ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ಈ ವರ್ಷ ತನ್ನ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ. ಈ ಸಂಭ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲು ಇಚ್ಛೆಸಿದೆ. ಹೀಗಾಗಿ ಈ ಐತಿಹಾಸಿಕ ಮೈಲಿಗಲ್ಲನ್ನ ಕೇವಲ ಅದ್ದೂರಿ ಕಾರ್ಯಕ್ರಮಗಳ ಮೂಲಕ ಆಚರಿಸುವ ಬದಲು, ಸಮಾಜಕ್ಕೆ ಉಪಯುಕ್ತವಾದ ಹಾಗೂ ಶಾಶ್ವತವಾದ ಕೆಲಸವೊಂದನ್ನ ಮಾಡಬೇಕು ಎಂದು ಸಮಿತಿ ನಿರ್ಧರಿಸಿತ್ತು.
ಈ ವೇಳೆ ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರ್ ಎಂಬಲ್ಲಿನ ನಿವಾಸಿ ಭಾಗಿ ಎಂಬವರು ತೀರಾ ಬಡವರಾಗಿದ್ದು, ಒಂಟಿಯಾಗಿ ಟರ್ಪಾಲಿನ ಜೋಪಡಿಯೊಂದರಲ್ಲಿ ವಾಸಿಸುತ್ತಿದ್ದರು. ಈ ಪರಿಸರದಲ್ಲಿ ಆರ್ ಎಸ್ ಎಸ್ ಪ್ರಾಯೋಜಿತ ತುಡರ್ ಕಾರ್ಯಕ್ರಮ, ಕಾಳಿಕಾಂಬಾ ಭಜನಾ ಮಂಡಳಿ ಪ್ರಾಯೋಜಿತ ಮನೆಯಂಗಳದ ಭಜನೆ ಮೊದಲಾದ ಕಾರ್ಯಕ್ರಮದ ನಡೆದ ವೇಳೆ ಮಹಿಳೆಯ ಸಮಸ್ಯೆ ಸಮಾಜದ ಅರಿವಿಗೆ ಬಂದಿತ್ತು.
ಇದನ್ನು ಮನಗಂಡ ಸಮಿತಿಯು ಭಾಗವಾಗಿ ಟಾರ್ಪಲ್ ಹೊದಿಸಿದ ಗುಡಿಸಲಿನಲ್ಲಿ ತುಂಬ ಕಷ್ಟದಿಂದ ಜೀವನ ನಡೆಸುತ್ತಿದ್ದ, ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಭಾಗಿ ಅವರ ಸ್ಥಿತಿಯನ್ನ ಅರಿತು ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಅವರಿಗೆ ಸುಸಜ್ಜಿತ ಮನೆಯೊಂದನ್ನ ಉಚಿತವಾಗಿ ನಿರ್ಮಿಸಿಕೊಡುವ ಮಹತ್ವದ ನಿರ್ಧಾರ ಕೈಗೊಂಡಿತು.
ಹಲವರ ಬೆಂಬಲ :
ಇಷ್ಟೊಂದು ದೊಡ್ಡ ಮೊತ್ತದ ಕಾರ್ಯ ಕೇವಲ ಒಂದು ಸಮಿತಿಯಿಂದ ಮಾತ್ರ ಸಾಧ್ಯವಿರಲಿಲ್ಲ. ಗಣೇಶೋತ್ಸವ ಸಮಿತಿಯ ಈ ಪುಣ್ಯ ಕಾರ್ಯಕ್ಕೆ ಊರಿನ ಜನರ ಬೆಂಬಲ, ಟೀಮ್ ದಕ್ಷಿಣ ಕಾಶಿ, ಟೀಮ್ ಅಘೋರ ಸೇರಿದಂತೆ ಉಪ್ಪಿನಂಗಡಿಯ ಹಲವು ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ವ್ಯಾಪಾರಸ್ಥರು, ದಾನಿಗಳು ಕೈಜೋಡಿಸಿದರು. ಇದರಿಂದ ಬಡ ಮಹಿಳೆಗೆ ಸುಂದರವಾದ, ಸುಸಜ್ಜಿತವಾದ ಹಾಗೂ ಎಲ್ಲಾ ಸೌಕರ್ಯಗಳಿರುವ ಮನೆ ನಿರ್ಮಾಣವಾಯ್ತು.
ಏನೆಲ್ಲಾ ಸೌಕರ್ಯ ಇದೆ?
ಹೊಸ ಮನೆ ನಿರ್ಮಾಣಕ್ಕಾಗಿ 2026ರ ಜನವರಿ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಹಗಲಿರುಳು ನಡೆದ ನಿರಂತರ ಕಾಮಗಾರಿಯ ಫಲವಾಗಿ ಇದೀಗ ಸುಂದರವಾದ ಆರ್.ಸಿ.ಸಿ ಮನೆ ತಲೆ ಎತ್ತಿದೆ. ಇದರಲ್ಲಿ ಹಾಲ್, ಒಂದು ಊಟದ ಹಾಲ್, ಬೆಡ್ ರೂಂ, ಅಡುಗೆ ಕೋಣೆ ಹಾಗೂ ಮನೆಗೆ ತಾಗಿಕೊಂಡೇ ಸ್ನಾನಗೃಹ ಮತ್ತು ಶೌಚಾಲಯದ ನಿರ್ಮಾಣವಾಗಿದೆ. ಇದರೊಂದಿಗೆ ಸ್ನಾನ ಗೃಹಕ್ಕೆ ನೀರಿನ ಸ್ಟೀಲ್ ಅಂಡೆಯನ್ನು ಕೂಡಾ ಸಮಿತಿಯೇ ಅಳವಡಿಸಿದೆ. ಎಲ್ಲ ಕೋಣೆಗಳಿಗೆ ಕಿಟಕಿ ಬಾಗಿಲುಗಳ ಜೋಡಣೆಯೂ ಆಗಿದ್ದು, ವಯರಿಂಗ್, ಪ್ಲಂಬಿಂಗ್ ಕೆಲಸವನ್ನೂ ಮನೆಯ ಸುತ್ತಲೂ ಇಂಟರ್ಲಾಕ್ ಅಳವಡಿಸಲಾಗಿದೆ.
ಸೆಪ್ಟೆಂಬರ್ 10ರಂದು ಭಾಗಿ ಅವರಿಗೆ ಈ ಹೊಸ ಮನೆಯ ಕೀಲಿಕೈಯನ್ನ ಹಸ್ತಾಂತರಿಸಲಾಯಿತು. ಹೊಸ ಮನೆಯ ಕೀಲಿಕೈ ಸ್ವೀಕರಿಸಿದ ಭಾಗಿ ಅವರ ಕಣ್ಣಲ್ಲಿ ಆನಂದಭಾಷ್ಪ ಹರಿದಿತ್ತು.

