ಮಂಗಳೂರಿನಲ್ಲಿ ಸೆ. 18ರಂದು ಸಚಿವ ಸಂಪುಟದ ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಶನಿವಾರ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಜಿಲ್ಲೆಗೆ ಸಂಬಂಧಿಸಿದಂತೆ 44 ಅಂಶಗಳನ್ನೊಳಗೊಂಡ ಬೇಡಿಕೆ ಪಟ್ಟಿ ಸಲ್ಲಿಸಿದೆ.
Sponsoredದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಸಂಸದ ಕ್ಯಾ| ಬ್ರಿಜೇಶ್ ಚೌಟ ಹಾಗೂ ಜಿಲ್ಲೆಯ ಶಾಸಕರನ್ನೊಳಗೊಂಡ ನಿಯೋಗವು ಬೆಂಗಳೂರಲ್ಲಿ ಸಿಎಂ ಜತೆ ಸಭೆ ನಡೆಸಿದ್ದು, ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿತು.
Marriage AdSponsoredಯಾವೆಲ್ಲಾ ಬೇಡಿಕೆ ಇಡಲಾಗಿದೆ?
ತುಳು ಭಾಷೆಗೆ ಎರಡನೇ ಭಾಷೆಯಾಗಿ ಮಾನ್ಯತೆ ನೀಡಬೇಕು, ವ್ಯಸನ ಮುಕ್ತ ಕರಾವಳಿ ಜಿಲ್ಲೆಗೆ ವಿಶೇಷ ಟಾಸ್ಕ್ಪೋರ್ಸ್ ರಚನೆ ಮಾಡಬೇಕು, ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಟೆಂಪಲ್ ಟೂರಿಸಂಗೆ ವಿಶೇಷ ಪ್ಯಾಕೇಜ್ ನೀಡಬೇಕು, ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಜನವಸತಿ ಪ್ರದೇಶ ಹೊರತುಪಡಿಸಿ ಕೃಷಿ ಭೂಮಿ ಹೊರತುಪಡಿಸಿ ಝೀರೋ ಬಫರ್ ಝೋನ್ ಗಡಿ ಗುರುತು ಮಾಡಬೇಕು, ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಐ. ಟಿ. ಪಾರ್ಕ್ ಘೋಷಣೆ ಮಾಡಬೇಕು, ಉಳ್ಳಾಲದ ಕಡಲ ಕೊರೆತ ತಡೆಗೆ ಶಾಶ್ವತ ಪರಿಹಾರಕ್ಕಾಗಿ ವಿಶೇಷ ಅನುದಾನ ನೀಡಬೇಕು, ಮಂಗಳೂರು ಅಳಿವೆ ಬಾಗಿಲು ಮತ್ತು ನೇತ್ರಾವತಿ ನದಿ ಹಾಗೂ ಗುರುಪುರ ನದಿಯಲ್ಲಿ ತುರ್ತು ಡ್ರಜ್ಜಿಂಗ್ ಮಾಡಬೇಕು, ಸೀ ಆಯಂಬುಲೆನ್ಸ್ ಆರಂಭಿಸಬೇಕು, ನಾಡ ದೋಣಿಗೆ ಎಂಜಿನ್ಗೆ ಉಪಯೋಗಿಸುವ ಸೀಮೆಎಣ್ಣೆಯನ್ನು ಪಡಿತರ ರೀತಿಯಲ್ಲಿ ಕೈಗೆಟಕುವ ದರದಲ್ಲಿ ನೀಡಬೇಕು.
ಶೂನ್ಯ ಬಡ್ಡಿಯಲ್ಲಿ ಮೀನುಗಾರರ ಮಹಿಳೆಯರಿಗೆ ಮೀನು ಉದ್ಯಮಕ್ಕೆ ಸಾಲ ನೀಡಬೇಕು, ವಸತಿ ರಹಿತ ಕುಟುಂಬಗಳಿಗೆ ವಸತಿ ಯೋಜನೆಯಲ್ಲಿ ಮನೆ ನಿವೇಶನ ಒದಗಿಸಬೇಕು. ಪ.ಜಾತಿ ಮತ್ತು ಪಂಗಡದವರಿಗೆ ವಿಶೇಷ ಅನುದಾನ ಒದಗಿಸುವುದು. ದ.ಕ. ಜಿಲ್ಲೆಯಲ್ಲಿ ಹಕ್ಕುಪತ್ರವನ್ನು ಪಡಕೊಂಡಿರುವ ಫಲಾನುಭವಿಗಳಿಗೆ ಮನೆ ಕಟ್ಟಲು ಏಕ ನಿವೇಶನ (ಸಿಂಗಲ್ ಸೈಟ್) ನಿಂದ ವಿನಾಯಿತಿ ನೀಡಬೇಕು ಮತ್ತು ಪಂ. ನಿಂದ ಪರವಾನಿಗೆ ನೀಡಲು ಕ್ರಮ ಕೈಗೊಳ್ಳಬೇಕು, ವೆನ್ಲಾಕ್ ಸರಕಾರಿ ಆಸ್ಪತ್ರೆಯ ತೀವ್ರನಿಗಾ ಘಟಕವನ್ನು (ಐ.ಸಿ.ಯು.) 250 ಬೆಡ್ಗಳಿಗೆ ಹೆಚ್ಚಿಸಬೇಕು. ದ.ಕ. ಜಿಲ್ಲೆಯಲ್ಲಿ ಸರಕಾರಿ ಭೂಮಿಯಲ್ಲಿರುವ ದೈವ, ದೇವಸ್ಥಾನದ ಭೂಮಿಯನ್ನು ಅಕ್ರಮ ಸಕ್ರಮದ ಅಡಿಯಲ್ಲಿ ಸಕ್ರಮಗೊಳಿಸಿ ದಾಖಲೆಯನ್ನು ನೀಡಬೇಕು. ಮರಳು ಪರವಾನಿಗೆ ಸರಳಗೊಳಿಸಿ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು.
ಕೆಂಪು ಕಲ್ಲು ಈ ಹಿಂದಿನ ದರದಲ್ಲಿ ಸಿಗುವಂತೆ ಮಾಡಬೇಕು. ಕೃಷಿಗೆ ಕಾಡಾನೆಗಳ ದಾಳಿ ತಡೆಯಲು ಆನೆ ಕಂದಕ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್, ಎಲ್ಲ ತಾಲೂಕುಗಳಲ್ಲಿ ಕೈಗಾರಿಕ ವಲಯ ಅನುಷ್ಠಾನಕ್ಕೆ ಕನಿಷ್ಠ ತಲಾ 100 ಎಕ್ರೆ ಸರಕಾರಿ ಜಮೀನು ಕಾಯ್ದಿರಿಸಬೇಕು, ರಸ್ತೆ, ಒಳಚರಂಡಿ, ಸೇತುವೆ ಮತ್ತು ಸಂಪರ್ಕ ರಸ್ತೆಗಳು ಹಾಳಾಗಿ ಗುಂಡಿಗಳಿಂದ ಕೂಡಿದ್ದು ರಸ್ತೆ ಅಭಿವೃದ್ಧಿಗೆ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 1,000 ಕೋ. ರೂ. ವಿಶೇಷ ಅನುದಾನ ನೀಡಬೇಕು, ಜಿಲ್ಲೆಯ ಹೊಸ ತಾಲೂಕುಗಳಲ್ಲಿ ಎಲ್ಲ ಇಲಾಖೆಗಳು ಖಾಯಂ ಆಗಿ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು, ಡಿ. ಸಿ. ಮನ್ನಾ ಜಾಗವನ್ನು ಪ. ಜಾತಿ ಮತ್ತು ಪಂಗಡಗಳ ಕುಟುಂಬಗಳಿಗೆ ಕೃಷಿ ಮಾಡಲು ಮಂಜೂರಾತಿ ಮಾಡಲು ಅವಕಾಶ ನೀಡಬೇಕು ಮೊದಲಾದ 44 ಬೇಡಿಕೆಗಳನ್ನು ಸಲ್ಲಿಸಲಾಯಿತು.




