Home » SIR ಪರಿಶೀಲನೆ ವೇಳೆ ಮತ್ತೆ ಒಂದಾದ 35 ವರ್ಷಗಳ ಹಿಂದೆ ದೂರಾಗಿದ್ದ ಸಹೋದರರು!!

SIR ಪರಿಶೀಲನೆ ವೇಳೆ ಮತ್ತೆ ಒಂದಾದ 35 ವರ್ಷಗಳ ಹಿಂದೆ ದೂರಾಗಿದ್ದ ಸಹೋದರರು!!

0 comments

ಬರೋಬ್ಬರಿ ಮೂರೂವರೆ ದಶಕಗಳ ಹಿಂದೆ ನಾಪತ್ತೆಯಾಗಿ, ಕುಟುಂಬಸ್ಥರಿಂದ ಸತ್ತೇಹೋಗಿರಬಹುದು ಎಂದು ಭಾವಿಸಲಾಗಿದ್ದ ವ್ಯಕ್ತಿಯೊಬ್ಬರು SIR ಪರಿಷ್ಕರಣೆ ವೇಳೆ ಸುಮಾರು 35 ವರ್ಷಗಳ ಬಳಿಕ ತಮ್ಮ ಸ್ವಂತ ಸಹೋದರನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಪರೂಪದ ಘಟನೆ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆದಿದೆ.

ಆರು ಜನ ಸಹೋದರರಲ್ಲಿ ಐದನೆಯವರಾದ ಸೀತಾರಾಮ್, ಹಲವು ವರ್ಷಗಳ ಹಿಂದೆ ಕುಟುಂಬದಿಂದ ದೂರವಾಗಿ ಪಂಜಾಬ್‌ನಲ್ಲಿ ನೆಲೆಸಿದ್ದರು. ಅಲ್ಲಿ ಖಾಸಗಿ ಶಾಲೆಯೊಂದರಲ್ಲಿ ಪ್ಯೂನ್ ಆಗಿ ಕೆಲಸ ಆರಂಭಿಸಿ, ಬಳಿಕ ಸರ್ಕಾರಿ ನೌಕರಿ ಪಡೆದಿದ್ದರು. ಇತ್ತೀಚೆಗೆ ತಮ್ಮ ಹಳೆಯ ಶಾಲಾ ವರ್ಗಾವಣೆ ಪ್ರಮಾಣಪತ್ರವನ್ನು ಪಡೆಯಲು ಮನೋಹರ್‌ಪುರದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಗೆ ಅವರು ಬಂದಿದ್ದರು.

ಆ ಸಂದರ್ಭದಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದಲ್ಲಿ ತೊಡಗಿದ್ದ ಬೂತ್ ಮಟ್ಟದ ಅಧಿಕಾರಿ (BLO) ಕೃಷನ್ ಕುಮಾರ್, ಸೀತಾರಾಮ್ ಅವರ ಗುರುತಿನ ದೃಢೀಕರಣಕ್ಕಾಗಿ ಅವರ ಗ್ರಾಮ, ತಂದೆ ಹಾಗೂ ಸಹೋದರರ ವಿವರಗಳನ್ನು ಕೇಳಿದರು. ಆಗ ಸೀತಾರಾಮ್ ತಮ್ಮ ಸೋದರ ಬಲ್ಬೀರ್ ಹೆಸರು ತಿಳಿಸಿದರು.

ಪರಿಶೀಲನೆಯ ಭಾಗವಾಗಿ ಅಧಿಕಾರಿ ಕೃಷನ್ ಕುಮಾರ್ ಸ್ಥಳೀಯವಾಗಿ ನೆಲೆಸಿದ್ದ ಬಲ್ಬೀರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ‘ಸೀತಾರಾಮ್’ ಎಂಬ ಹೆಸರನ್ನು ಕೇಳುತ್ತಿದ್ದಂತೆಯೇ ಬಲ್ಬೀರ್ ಭಾವುಕರಾದರು. “ಅವರು ನನ್ನ ಸ್ವಂತ ಅಣ್ಣ, ಕಳೆದ 35 ವರ್ಷಗಳಿಂದ ನಾವು ಅವರಿಗಾಗಿ ಹುಡುಕಾಡುತ್ತಿದ್ದೇವೆ” ಎಂದು ಉದ್ವೇಗದಿಂದ ನುಡಿದರು.

ನಾಪತ್ತೆಯಾದ ಸೀತಾರಾಮ್ ಬದುಕಿರುವ ಸಾಧ್ಯತೆಯೇ ಇಲ್ಲ ಎಂದು ಭಾವಿಸಿದ್ದ ಕುಟುಂಬಸ್ಥರು, ಅನುಮಾನ ಪರಿಹರಿಸಿಕೊಳ್ಳಲು ‘ಅವರಿಗೆ ಕಾಲಿನಲ್ಲಿ ಊನವಿದೆಯೇ?’ ಎಂದು ಅಧಿಕಾರಿಯನ್ನು ವಿಚಾರಿಸಿದರು. ಅಧಿಕಾರಿ ಹೌದು ಎಂದು ಖಚಿತಪಡಿಸುತ್ತಿದ್ದಂತೆಯೇ, ಬಲ್ಬೀರ್ ಶಾಲೆಯತ್ತ ಧಾವಿಸಿ ಬಂದರು. ಶಾಲೆಯ ಆವರಣದಲ್ಲಿ 35 ವರ್ಷಗಳ ಬಳಿಕ ಮುಖಾಮುಖಿಯಾದ ಸಹೋದರರಿಬ್ಬರೂ ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. ಮೂರೂವರೆ ದಶಕಗಳ ಕಾಲದ ಅಗಲಿಕೆಯ ನೋವು ಮತ್ತು ಅನಿರೀಕ್ಷಿತ ಮಿಲನದ ಆನಂದವನ್ನು ಕಂಡ ಅಲ್ಲಿದ್ದ ಅಧಿಕಾರಿಗಳು ಹಾಗೂ ಸ್ಥಳೀಯರು ಸಹ ಕಣ್ಣಂಚು ಒದ್ದೆ ಮಾಡಿಕೊಂಡರು

You may also like