ಮನೆ ಕಟ್ಟುತ್ತಿರುವವರಿಗೆ ಬಿಗ್ ಶಾಕ್- ನಾಳೆಯಿಂದ ರಾಜ್ಯದಲ್ಲಿ ಜಲ್ಲಿಕಲ್ಲು ಪೂರೈಕೆ ಬಂದ್
ರಾಜ್ಯದಲ್ಲಿ ಮನೆ ಕಟ್ಟುತ್ತಿರುವವರಿಗೆ ಅಥವಾ ಯಾವುದಾದರೂ ಕಟ್ಟಡಗಳನ್ನು ನಿರ್ಮಿಸುತ್ತಿರುವವರಿಗೆ ದೊಡ್ಡ ಶಾಕ್ ಎದುರಾಗಿದ್ದು ನಾಳೆಯಿಂದ ರಾಜ್ಯಾದ್ಯಂತ ಜಲ್ಲಿಕಲ್ಲು ಹಾಗೂ ಎಮ್ ಸ್ಯಾಂಡ್ ಪೂರೈಕೆ ಸ್ಥಗಿತವಾಗಲಿದೆ.
Sponsoredಹೌದು, ಗಣಿಗಾರಿಕೆಗೆ ಸಂಬಂಧಿಸಿದಂತೆ ಎರಡು ಕಡೆಗಳಲ್ಲಿ ರಾಜಧನ ಸಂಗ್ರಹಿಸುತ್ತಿರುವ ಕ್ರಮವನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ನಾಳೆ (ಸೆ 18)ಯಿಂದ ರಾಜ್ಯಾದ್ಯಂತ ಕಲ್ಲು ಕ್ವಾರಿ, ಜಲ್ಲಿ ಕ್ರಷರ್ ಹಾಗೂ ಎಂ.ಸ್ಯಾಂಡ್ ಘಟಕಗಳನ್ನು ಬಂದ್ ಮಾಡಿ ಉಗ್ರ ಹೋರಾಟ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸುತ್ತಿರುವವರಿಗೆ ಜಲ್ಲಿಕಲ್ಲು ಮತ್ತು ಎಂ ಸ್ಯಾಂಡ್ ಪೂರೈಕೆ ಸಿಗುವುದಿಲ್ಲ ಎಂದು ವರದಿಗಳು ಹೇಳಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಡಿ. ಸಿದ್ಧರಾಜು ಅವರು, ರಾಜ್ಯದಾದ್ಯಂತ ಇರುವ ಕಲ್ಲು ಕ್ವಾರಿಗಳು, ಜಲ್ಲಿ ಕ್ರಷರ್‌ಗಳು ಹಾಗೂ ಎಂ.ಸ್ಯಾಂಡ್ ಘಟಕಗಳನ್ನು ಸ್ಥಗಿತಗೊಳಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ಎರಡು ಕಡೆ ರಾಜಧನ ವಸೂಲಿ ಮಾಡುವ ಕ್ರಮವನ್ನು ಕೈಬಿಟ್ಟು ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿ, ಅದನ್ನು ರಾಜ್ಯಪತ್ರದಲ್ಲಿ ಪ್ರಕಟಿಸುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದರು.




