ಶನಿವಾರ, 24 ಅಕ್ಟೋಬರ್ 2026

ಬೆಂಗಳೂರು : ಹೋಟೆಲ್ಗಳ ಮೇಲೆ ಆಹಾರ ಅಧಿಕಾರಿಗಳ ದಾಳಿ – 2 ವರ್ಷದ ಹಿಂದಿನ ಚಿಕನ್‌, 1 ವರ್ಷದ ಹಿಂದಿನ ಮೀನು ಮಾಂಸ ಪತ್ತೆ

ಬೆಂಗಳೂರಲ್ಲಿ ಸಿಲಿಕಾನ್‌ ಸಿಟಿಯ ಫೈವ್‌ಸ್ಟಾರ್, ತ್ರೀ ಸ್ಟಾರ್ ಹೊಟೇಲ್‌ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ ಮುಂದುವರಿದಿದ್ದು, ಅವಧಿ ಮೀರಿದ ಆಹಾರಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಹಾರ್ಟ್ ಆಫ್ ದಿ ಸೆಂಟರ್‌ನಲ್ಲಿರುವ ವಿಐಪಿಗಳು ಹಾಗೂ ಟೆಕ್ಕಿಗಳು ಹೆಚ್ಚಾಗಿ ಭೇಟಿ ನೀಡುವ ಪ್ರಸಿದ್ಧ ಯುಬಿ ಸಿಟಿ ಹಾಗೂ ಬ್ರಿಗೇಡ್ ರಸ್ತೆಯ ಐಷಾರಾಮಿ ರೆಸ್ಟೋರೆಂಟ್, ಫುಡ್ ಔಟ್‌ಲೆಟ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಪಂಚತಾರಾ ಹೋಟೆಲ್‌ಗಳ ಅಡುಗೆ ಮನೆಗಳಲ್ಲಿನ ಅವ್ಯವಸ್ಥೆ ಬಯಲಾಗಿದೆ. ಪ್ರಸಿದ್ಧ ಯುಬಿ ಸಿಟಿ ಹಾಗೂ ಬ್ರಿಗೇಡ್ ರಸ್ತೆಯ ಐಷಾರಾಮಿ ರೆಸ್ಟೋರೆಂಟ್‌ಗಳಲ್ಲಿ ಆಹಾರ ಪ್ರಿಯರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಬೆಳಕಿಗೆ ಬಂದಿದೆ. 

15 ಜನರ ಅಧಿಕಾರಿಗಳ ತಂಡವೇ ರೆಸ್ಟೋ ಬಾರ್‌ನಲ್ಲಿ ಶೇಖರಿಸಿ ಇಟ್ಟಿದ್ದ ಆಹಾರ ಕಂಡು ಶಾಕ್ ಆಗಿದ್ದು, ಫ್ರೀಜರ್‌ಗಳಲ್ಲಿ 2 ವರ್ಷದಿಂದ ಇಟ್ಟಿದ್ದ ಚಿಕನ್, 1 ವರ್ಷದಷ್ಟು ಹಿಂದಿನ ಮೀನಿನ ಮಾಂಸ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಫುಡ್ ಆಫಿಸರ್ಸ್‌ 10ಕ್ಕೂ ಹೆಚ್ಚು ಹೋಟೆಲ್ ಮೇಲೆ ದಾಳಿ ಮಾಡಿದ್ದು, 5 ಹೊಟೇಲ್‌ಗಳಲ್ಲಿ ಈ ರೀತಿಯ ಸೇವೆನೆಗೆ ಸೂಕ್ತವಲ್ಲದ ಆಹಾರ ಪತ್ತೆಯಾಗಿದೆ. ಹಲವು ಕಡೆ ಲೇಬಲ್ ಇಲ್ಲದ ಕೇಕ್, ಬಳಕೆಗೆ ಸೂಕ್ತವಲ್ಲದ ತರಕಾರಿ, ಕೊಳತೆ ಮಾಂಸ ಪತ್ತೆಯಾಗಿದೆ. ಈ ಎಲ್ಲಾ ಆಹಾರವನ್ನ ಸೀಜ್ ಮಾಡಿರೋ ಅಧಿಕಾರಿಗಳ ತಂಡ ಆಹಾರವನ್ನ ಲ್ಯಾಬ್‌ಗೆ ರವಾನೆ ಮಾಡಿ, ಹೊಟೇಲ್‌ಗಳಿಗೆ ನೋಟಿಸ್ ನೀಡಿದೆ.

ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಯುಟಿ ಖಾದರ್, ನಿಯಮ ಪಾಲನೆ ಮಾಡದ ಹೊಟೇಲ್‌ಗಳನ್ನ ಮುಲಾಜಿಲ್ಲದೇ ಕ್ಲೋಸ್ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಹೊಟೇಲ್‌ಗಳು ಇನ್ನುಮುಂದೆ ಅಡುಗೆ ಮನೆಯಲ್ಲೂ ಗ್ರಾಹಕರು ನೋಡುವ ರೀತಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ಮೊದಲ ಹಂತದಲ್ಲಿ ಜಾಗೃತಿ.. ಅದು ಆಗಲಿಲ್ಲ ಅಂದರೆ ಕ್ರಮ ಗ್ಯಾರಂಟಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.