ಬೆಳಗಾವಿ ಸಮೀಪದ ಜಾಲಿಕೊಪ್ಪ ಗ್ರಾಮದ ಬಳಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಬರೋಬ್ಬರಿ 36 ಕುರಿಗಳು ಮೃತಪಟ್ಟಿರುವ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.
Sponsoredಕೆಂಗಾನೂರ ಗ್ರಾಮದ ಕುರಿಗಾಯಿ ಚಂದ್ರಪ್ಪ ಹಿತ್ತಲಮನಿ, ಈರಪ್ಪ ಕುರಿ, ನಡುವಿನಕೊಪ್ಪ ಗ್ರಾಮದ ಈರಪ್ಪ ವಗ್ಗರ ಅವರಿಗೆ ಸೇರಿದ ಕುರಿಗಳು ಜಾಲಿಕೊಪ್ಪ ಗ್ರಾಮದ ಮುಖ್ಯರಸ್ತೆಯಲ್ಲಿ ರಸ್ತೆ ದಾಟುವಾಗ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಕುರಿಗಳು ರಸ್ತೆಪಕ್ಕ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಆ ದೃಶ್ಯ ಜನರ ಕರುಳು ಹಿಂಡುವಂತಿತ್ತು. ಹಲವಾರು ಗರ್ಭಿಣಿ ಕುರಿಗಳ ಹೊಟ್ಟೆ ಸೀಳಿ ಮರಿಗಳು ಹೊರಬಿದ್ದಿರುವ ದೃಶ್ಯ ಸ್ಥಳೀಯರ ಕಣ್ಣೀರಿಗೂ ಕಾರಣವಾಯಿತು. ಇನ್ನು ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಅಪಘಾತದ ಬಳಿಕ ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕುರಿಗಳ ಸಾವಿನಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಕಾರು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುರಿಗಳ ಮಾಲೀಕರು ಆಗ್ರಹಿಸಿದ್ದಾರೆ. ಮಾಹಿತಿ ತಿಳಿದು ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಚಾಲಕನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.




