ಶನಿವಾರ, 24 ಅಕ್ಟೋಬರ್ 2026

ಬಂಟ್ವಾಳ ಅಬ್ದುಲ್ ರೆಹಮಾನ್ ಕೊಲೆ ಕೇಸ್- ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಪೊಲೀಸ್ ನೋಟಿಸ್

ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಂಟ್ವಾಳದ ಕೊಳತ್ತಮಜಲು ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳತ್ತಮಜಲು ಇರಾಕೋಡಿಯಲ್ಲಿ 2025 ರ ಮೇ 27 ರಂದು ಅಂದರೆ ಸುಮಾರು ಒಂದೂವರೆ ವರ್ಷಗಳ ಹಿಂದೆ ಅಬ್ದುಲ್ ರಹಿಮಾನ್ ಎಂಬುವವರ ಭೀಕರ ಹತ್ಯೆಯಾಗಿತ್ತು. ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿತ್ತು ಎನ್ನಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ದೀಪಕ್ ಮತ್ತು ಆತನ ಸಹಚರರು, ಇರಾಕೋಡಿಯಲ್ಲಿ ದೀಪಕ್ ಮನೆಯ ಬಳಿ ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಮರಳು ಇಳಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿ ಪಿಕಪ್ ವಾಹನದಲ್ಲಿದ್ದ ಅಬ್ದುಲ್ ರಹಿಮಾನ್‌ನನ್ನು ಹೊರಗೆಳೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. 

ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರಂಭದಲ್ಲಿ 15 ಮಂದಿಯ ವಿರುದ್ಧ ಎಫ್‌ಐಆರ್ (FIR) ದಾಖಲಾಗಿತ್ತು.ಪ್ರಕರಣದ ತನಿಖೆ ಮುಂದುವರಿಸಿರುವ ಬಂಟ್ವಾಳ ಪೊಲೀಸರು, ಕೆಲವೊಂದು ಸತ್ಯಾಂಶ ಹಾಗೂ ಸನ್ನಿವೇಶಗಳನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿದ್ದಾರೆ. ಸೆಪ್ಟೆಂಬರ್ 26 ರಂದು ಕಲ್ಲಡ್ಕದಲ್ಲಿರುವ ತಮ್ಮ ನಿವಾಸದಲ್ಲಿ ವಿಚಾರಣೆಗೆ ಲಭ್ಯವಿರಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರ ನಡೆಗೆ ವಿಶ್ವ ಹಿಂದೂ ಪರಿಷತ್ (VHP) ಹಾಗೂ ಬಜರಂಗದಳ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.