ಜೀರೋ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್ ಮೂಲಕ ದಾವಣಗೆರೆಯಿಂದ ಮಣಿಪಾಲ್‌ಗೆ ಕರೆದೊಯ್ಯುತ್ತಿದ್ದ ಮೂರು ತಿಂಗಳ ಮಗು ಮೃತಪಟ್ಟಿರುವ ಘಟನೆ ನಡೆದಿದೆ.
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮೂರು ತಿಂಗಳ ಮಗುವನ್ನು ತುರ್ತು ಚಿಕಿತ್ಸೆಗೆಂದು ಆಂಬುಲೆನ್ಸ್‌ನಲ್ಲಿ ಜೀರೋ ಟ್ರಾಫಿಕ್‌ನಲ್ಲಿ ಸಾಗಿಸುವ ಸಮಯದಲ್ಲಿ ಈ ಘಟನೆ ನಡೆದಿದೆ. ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಿಂದ ಉಡುಪಿಯ ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಗೆ ಗುರುವಾರ ರಾತ್ರಿ ಮಗುವನ್ನು ಕಳುಹಿಸಿಕೊಡಲಾಯಿತಾದರೂ ಮಗು ಬದುಕಲಿಲ್ಲ.
ದಾವಣಗೆರೆ ಜಿಲ್ಲೆ ಹರಿಹರ ಮೂಲದ ಪಲ್ಲವಿ ಅವರನ್ನು ಕೊಪ್ಪಳದ ಹನುಮೇಶ್ವರ ಅವರಿಗೆ ವಿವಾಹ ಮಾಡಿಕೊಡಲಾಗಿದ್ದು, ದಂಪತಿಯ ಮೂರು ತಿಂಗಳು 26 ದಿನದ ಮಗು ಅನ್ವಿಕಾಗೆ ವಿಪರೀತ ಜ್ವರ ಬಂದಿದ್ದು, ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶ್ವಾಸಕೋಶದ ಸೋಂಕು ಪತ್ತೆಯಾಗಿದ್ದು, ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲು ಮಾಡಲು ವೈದ್ಯರ ಸಲಹೆಯ ಮೇರೆಗೆ ಕೊಂಡೊಯ್ಯಲಾಗುತ್ತಿತ್ತು.
ಮಗುವನ್ನು ಆಂಬುಲೆನ್ಸ್‌ನಲ್ಲಿ ಜೀರೋ ಟ್ರಾಫಿಕ್‌ನಲ್ಲಿ ಕಳುಹಿಸಲು ನಿರ್ಧಾರ ಮಾಡಿದ್ದು, ದಾವಣಗೆರೆ, ಶಿವಮೊಗ್ಗ, ಉಡುಪಿ ಪೊಲೀಸರು ವ್ಯವಸ್ಥೆ ಮಾಡಿದ್ದರು. ಹೊನ್ನಾಳಿ ತಾಲೂಕಿನ ಕಡದಕಟ್ಟೆ ಬಲಿ ಆಂಬುಲೆನ್ಸ್ ಟೈರ್ ಪಂಕ್ಚರ್ ಆಗಿದೆ. ಕೂಡಲೇ ಪೊಲೀಸರು ಟೈಯರ್ ಬದಲಾಯಿಸಿದ್ದಾರೆ. ಈ ವೇಳೆ ಮಗುವಿನ ಪಲ್ಸ್ ಕಡಿಮೆಯಾಗಿದ್ದು ವೈದ್ಯರ ತಂಡ ತುರ್ತು ಚಿಕಿತ್ಸೆಗೆಂದು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಿದ್ದಾರೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ತಮ್ಮ ಎಳೆ ಕಂದನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜೀರೋ ಟ್ರಾಫಿಕ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಮಗುವನ್ನು ವಿಶೇಷ ಆಂಬುಲೆನ್ಸ್‌ನಲ್ಲಿ ಮೃತದೇಹವನ್ನು ಹರಿಹರಕ್ಕೆ ಸಾಗಿಸಲಾಗಿರುವ ಕುರಿತು ವರದಿಯಾಗಿದೆ.



