ನಟ ದರ್ಶನ್ ಅವರ ಮ್ಯಾನೇಜರ್ ಹಾಗೂ ಪಿಎ ನಾಗರಾಜ್ ಅವರು ನಟ ಧನ್ವೀರ್ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಫೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನುವ ಗಂಭೀರ ಆರೋಪ ಧನ್ವೀರ್ ಮೇಲೆ ಕೇಳಿ ಬಂದಿದೆ.
ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ನಟ ಧನ್ವೀರ್ ಅವರ ಮನೆಗೆ ಕೆಲ ವಿಷಯಗಳ ಕುರಿತು ಚರ್ಚೆ ಮಾಡಲು ತೆರಳಿದ್ದರು. ಆದರೆ ಈ ಸಂದರ್ಭದಲ್ಲಿ ನಟ ಧನ್ವೀರ್ ಇರಲಿಲ್ಲ. ಹೀಗಾಗಿ ವಿಜಯಲಕ್ಷ್ಮೀ ಮತ್ತು ನಾಗರಾಜ್ ವಾಪಸ್ ಬಂದಿದ್ದರು.
ಮನೆಗೆ ಬಂದ ಬಳಿಕ ನಾಗರಾಜ್ ಅವರಿಗೆ ಧನ್ವೀರ್ ಫೋನ್ ಕರೆ ಮಾಡಿ, ಏಕವಚನದಲ್ಲಿ ನಿಂದಿಸಿ, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ನಾಗರಾಜ್ ದೂರು ದಾಖಲು ಮಾಡಿದ್ದಾರೆ. ಆರ್ ಆರ್ ನಗರ ಪೊಲೀಸರು ತನಿಖೆ ಮುಂದುವರಿಸಿದ್ದು, ವಿಚಾರಣೆ ಕೈಗೊಂಡಿದ್ದಾರೆ.



