ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಹೆತ್ತ ಮಗಳ ಮೇಲೆಯೇ ತಂದೆಯೊಬ್ಬ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮಗಳ ಮದುವೆ ನಿಶ್ಚಯದ ವೇಳೆ
ಗಂಡಿನ ಕಡೆಯವರಿಗೆ ಈತ ಇಟ್ಟ ಬೇಡಿಕೆಯಿಂದ ಕುಟುಂಬಸ್ಥರು ತಿರುಗಿಬಿದ್ದಿದ್ದೇ ಈ ಭೀಕರ ಕೃತ್ಯಕ್ಕೆ ಕಾರಣವಾಗಿದೆ.
ದೇವನಹಳ್ಳಿ ಸಮೀಪದ ವಿಜಯಪುರ ನಿವಾಸಿಯಾದ ನಾಗೇಂದ್ರ ಎಂಬಾತನೇ ಆರೋಪಿ. ಲಕ್ಷ್ಮೀದುರ್ಗಾ ಆತನ ಮಗಳು. ನಾಗೇಂದ್ರಗೆ ನಾಲ್ಕು ಮಕ್ಕಳಿದ್ದು, ಅವರಲ್ಲಿ ಎರಡನೇ ಮಗಳು ಲಕ್ಷ್ಮೀದುರ್ಗಾ ರಾಜಾನುಕುಂಟೆ ಬಳಿಯ SVIT ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ (ಅಸಿಸ್ಟೆಂಟ್ ಪ್ರೊಫೆಸರ್) ಕರ್ತವ್ಯ ನಿರ್ವಹಿಸುತ್ತಿದ್ದರು. ಲಕ್ಷ್ಮೀದುರ್ಗಾಗೆ ಒಂದು ತಿಂಗಳ ಹಿಂದಷ್ಟೇ ತಂದೆ ನಾಗೇಂದ್ರ ಗಂಡು ನೋಡಿದ್ದರು. ಗಂಡಿನ ಮನೆಯವರು ಹುಡುಗಿಯನ್ನು ನೋಡಿ ಮದುವೆಗೆ ಒಪ್ಪಿಗೆಯನ್ನೂ ಸೂಚಿಸಿದ್ದರು. ಇದೆಲ್ಲವೂ ಸುಸೂತ್ರವಾಗಿ ನಡೆದಿತ್ತು.
ಆದರೆ ವಿಚಿತ್ರ ಅಂದ್ರೆ ಮದುವೆ ಮಾತುಕತೆ ವೇಳೆ ದುರಾಸೆಗೆ ಬಿದ್ದ ನಾಗೇಂದ್ರ, “ನಾನು ಮಗಳನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಓದಿಸಿದ್ದೇನೆ. ಆಕೆಯನ್ನು ಮದುವೆಯಾಗಬೇಕಾದರೆ ನನಗೆ 40 ಲಕ್ಷ ರೂಪಾಯಿ ನಗದು ನೀಡಬೇಕು. ಜೊತೆಗೆ ಮದುವೆಯ ನಂತರವೂ ಆಕೆಯ ಪ್ರತಿ ತಿಂಗಳ ಸಂಬಳವನ್ನು ನನಗೇ ಕೊಡಬೇಕು” ಎಂದು ಗಂಡಿನ ಮನೆಯವರ ಬಳಿ ವಿಚಿತ್ರ ಷರತ್ತು ವಿಧಿಸಿದ್ದನು. ತಂದೆಯ ಈ ದುರಾಸೆ ಮತ್ತು ಹಠಮಾರಿತನಕ್ಕೆ ಸ್ವತಃ ಮಗಳು ಲಕ್ಷ್ಮೀದುರ್ಗಾ ಹಾಗೂ ಕುಟುಂಬದ ಇತರ ಸದಸ್ಯರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಅಲ್ಲದೆ ಮಗಳು ಹಾಗೂ ಪತ್ನಿ ವಿರೋಧ ವ್ಯಕ್ತಪಡಿಸಿದ್ದರಿಂದ ಕುಟುಂಬದಲ್ಲಿ ಕಲಹ ಉಂಟಾಗಿತ್ತು ಎನ್ನಲಾಗಿದೆ. ಮನೆಯಲ್ಲಿ ಎಲ್ಲರೂ ತನ್ನ ನಿರ್ಧಾರವನ್ನು ವಿರೋಧಿಸಿದ್ದರಿಂದ ಆಕ್ರೋಶಗೊಂಡ ನಾಗೇಂದ್ರ, ಮಕ್ಕಳೊಂದಿಗೆ ಗಲಾಟೆ ಮಾಡಿ ‘ನಿಮ್ಮನ್ನು ಸಾಯಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದನು. ತಂದೆಯ ಭಯಾನಕ ವರ್ತನೆ ಹಾಗೂ ಬೆದರಿಕೆಯಿಂದ ಹೆದರಿದ ಲಕ್ಷ್ಮೀದುರ್ಗಾ, ಒಂದು ತಿಂಗಳ ಹಿಂದೆ ಬಾಗಲೂರಿನಲ್ಲಿ ಪ್ರತ್ಯೇಕವಾಗಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸಲು ಶುರುಮಾಡಿದ್ದರು. ಅಲ್ಲಿಂದಲೇ ಕಾಲೇಜಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದರು.
ಆದರೆ, ಜುಲೈ 25ರಂದು ನಾಗೇಂದ್ರ ಮಗಳನ್ನು ಹುಡುಕಿಕೊಂಡು ಕಾಲೇಜಿಗೆ ಬಂದಿದ್ದಾನೆ. ಕಾಲೇಜಿನ HOD ಕೋಣೆಯಲ್ಲಿದ್ದ ಲಕ್ಷ್ಮೀದುರ್ಗಾ ಅವರನ್ನು ಭೇಟಿಯಾಗುತ್ತಿದ್ದಂತೆಯೇ, ಜೇಬಿನಲ್ಲಿದ್ದ ಚಾಕುವನ್ನು ತೆಗೆದು ಮಗಳ ಎದೆ, ಕುತ್ತಿಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಬರ್ಬರವಾಗಿ ಇರಿದು ಪರಾರಿಯಾಗಿದ್ದನು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ತಕ್ಷಣವೇ ಸಹೋದ್ಯೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗೇಂದ್ರ ಅವರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.




