ಕರ್ನಾಟಕ ಮೂಲದ 116 ವರ್ಷದ ನವನೀತಮ್ಮ ಅವರು ಆಂಧ್ರಪ್ರದೇಶದ ಸುಪ್ರಸಿದ್ದ ತಿರುಮಲ ಬೆಟ್ಟವನ್ನು ನಡಿಗೆಯಲ್ಲಿ ಹತ್ತುವ ಮೂಲಕ ಅಸಂಖ್ಯಾತ ಭಕ್ತರಿಗೆ ಪ್ರೇರಣೆಯಾಗಿದ್ದಾರೆ. ಇವರ ಉತ್ಸಾಹ ಹಾಗೂ ಸಾಧನೆಯನ್ನು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು ಅವರಿಗೆ ವಿಐಪಿ ದರ್ಶನದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ.
ಕರ್ನಾಟಕದ ಈ ಕುಟುಂಬವು ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದಾರೆ. ಈ ಕಾರಣದಿಂದಾಗಿ ಅಜ್ಜಿ ಕೂಡ ಕುಟುಂಬದೊಂದಿಗೆ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿದ್ದರು. ಆಗ ತಾನೂ ಕೂಡ ನಿಮ್ಮೊಂದಿಗೆ ಕಾಲ್ನಡಿಗೆಯಲ್ಲೇ ಬೆಟ್ಟ ಏರುವುದಾಗಿ ನಿರ್ಧರಿಸಿದ್ದರು. ಅಲಿಪಿರಿ ಮಾರ್ಗದ ಮೂಲಕ ಬೆಟ್ಟವನ್ನು ಹತ್ತಲು ಎಲ್ಲರೂ ಮುಂದಾಗಿದ್ದರು.
ಈ ಮಾರ್ಗವು 11 ಕಿ.ಮೀ ಉದ್ದವಿದ್ದು, ಸುಮಾರು 3,550 ಕಡಿದಾದ ಮೆಟ್ಟಿಲುಗಳನ್ನು ಒಳಗೊಂಡಿದೆ. ಯುವಕರು ಹಾಗೂ ದೈಹಿಕವಾಗಿ ಸದೃಢವಾಗಿರುವವರು ಕೂಡ ಈ ಮಾರ್ಗದಲ್ಲಿ ಕಷ್ಟ ಪಡುತ್ತಾರೆ. ಆದರೆ ಈ ಶತಾಯುಷಿ ಅಜ್ಜಿ ತನ್ನ ಕುಟುಂಬ ಸದಸ್ಯರ ನಿರಂತರ ಪ್ರೋತ್ಸಾಹ ಮತ್ತು ದೈಹಿಕ ಬೆಂಬಲದೊಂದಿಗೆ ಬೆಟ್ಟವನ್ನು ಹತ್ತಿದ್ದಾರೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈ ವಿಡಿಯೋವನ್ನು ಕಂಡು ಆಶ್ಚರ್ಯ ಪಟ್ಟು ಅಜ್ಜಿಯನ್ನು ಶ್ಲಾಘಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಅಜ್ಜಿಗೆ ದೇವಸ್ಥಾನದಲ್ಲಿ ವಿಐಪಿ ದರ್ಶನದ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ಶತಾಯುಷಿ ಅಜ್ಜಿಯನ್ನು ಭಾನುವಾರ ತಿರುಮಲಕ್ಕೆ ಕರೆ ತಂದು, ತಿರುಮಲದಲ್ಲಿ ಅವರು ತಂಗಿದ್ದ ಕಾಟೇಜ್ನಿಂದ ಟಿಟಿಡಿ ವಾಹನದಲ್ಲಿ ನವನೀತಮ್ಮ ಅವರನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಇಬ್ಬರು ಟಿಟಿಡಿ ಸಿಬ್ಬಂದಿಗಳು ಅವರನ್ನು ದೇಗುಲದ ಒಳಗೆ ಕರೆದೊಯ್ದು ಧ್ವಜಸ್ತಂಭವನ್ನು ಮುಟ್ಟಿಸಿದರು. ನಂತರ ಅವರು ಅಜ್ಜಿಯನ್ನು ದೇವಸ್ಥಾನಕ್ಕೆ ಕರೆದೊಯ್ದು ವೆಂಕಟೇಶ್ವರನ ದರ್ಶನ ಮಾಡಿಸಿದರು. ದರ್ಶನದ ನಂತರ, ರಂಗನಾಯಕಲು ಮಂಟಪದಲ್ಲಿರುವ ಎಲ್ಲಾ ವಿಐಪಿಗಳಂತೆ ನವನೀತಮ್ಮ ಅವರಿಗೆ ಶೇಷವಸ್ತ್ರದಿಂದ ಗೌರವಿಸಲಾಯಿತು. ತಿರುಮಲ ವೆಂಕಟೇಶ್ವರ ತೀರ್ಥ ಪ್ರಸಾದಗಳನ್ನು ನೀಡಲಾಯಿತು.



