ಶನಿವಾರ, 24 ಅಕ್ಟೋಬರ್ 2026

Indian Women: ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು ಮನೆಕೆಲಸ ಮಾಡುತ್ತಾರೆ- ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ !

Indian Women: ಪುರುಷರಿಗಿಂತ ಭಾರತೀಯ ಮಹಿಳೆಯರು ಮನೆಕೆಲಸ ಮತ್ತು ಆರೈಕೆಯಂತಹ ವೇತನವಿಲ್ಲದ ಕೆಲಸವನ್ನು 10 ಪಟ್ಟು ಹೆಚ್ಚು ಮಾಡುತ್ತಿದ್ದು, ವರದಿ ಬಹಿರಂಗಪಡಿಸಿದೆ.

Interesting Information
Image credit: gulfnews.com

Indian Women: ಭಾರತದಲ್ಲಿ ಜಾಸ್ತಿ ಮನೆ ಕೆಲಸ ಮಾಡುವವರು ಯಾರು ಗಂಡಸರಾ ಹೆಂಗಸರಾ ಅಂತ ಯಾರನ್ನಾದರೂ ಕೇಳಿದರೆ ಥಟ್ಟನೆ ಸರಿ ಉತ್ತರ ಬಂದೇ ಬರುತ್ತೆ. ಅದು ಹೆಂಗಸರು ಅಂತ. ಅದೇ ಪ್ರಶ್ನೆಯನ್ನು ಸ್ವಲ್ಪ ವಿಸ್ತರಿಸಿ ಕೇಳಿ. “ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯ ಮಹಿಳೆಯರು ಪುರುಷರಿಗಿಂತ ಎಷ್ಟು ಪಟ್ಟು ಹೆಚ್ಚು, ಈ ವೇತನವಿಲ್ಲದ ಮನೆಕೆಲಸ ಹಾಗೂ ಆರೈಕೆ ಕೆಲಸಗಳನ್ನು ಮಾಡುತ್ತಾರೆಂದು ? ರೆಡಿಮೇಡ್ ಉತ್ತರ ನಿಮ್ಮಲ್ಲಿ ಇಲ್ಲ ಅಲ್ಲವೇ ? ಈಗ ಅದಕ್ಕಾಗಿ ಉತ್ತರ ಹುಡುಕುತ್ತಾ ಅಧ್ಯಯನವೊಂದು ನಡೆದಿದೆ. ಆ ಸ್ಟಡಿ ಇಂಟರೆಸ್ಟಿಂಗ್ ಮಾಹಿತಿಯನ್ನು ಹೊರಹಾಕಿದೆ. ಭಾರತದ ಮಹಿಳೆಯರು ವಿಶ್ವದ ಇತರ ದೇಶಗಳಿಗಿಂತ ಬರೋಬ್ಬರಿ 10 ಪಟ್ಟು ಹೆಚ್ಚು ಮನೆ ಕೆಲಸ ಮಾಡುತ್ತಾರಂತೆ !

ಇದು ಮುಂಬೈನಲ್ಲಿರುವ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್ (ಐಐಪಿಎಸ್) ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ಜಂಟಿಯಾಗಿ ನಡೆಸಿದ ಸಂಶೋಧನೆಯಾಗಿದ್ದು, ಅಲ್ಲಿ ನಮ್ಮ ಭಾರತೀಯ ಮಹಿಳೆಯರ ಮನೆಕೆಲಸದ ತೀವ್ರತೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಮನೆ ಕೆಲಸದಲ್ಲೂ ವಿಶ್ವದಲ್ಲಿ ನಮ್ಮ ಮಹಿಳೆಯರೇ ಮುಂದೆ
ಪುರುಷರಿಗಿಂತ ಭಾರತೀಯ ಮಹಿಳೆಯರು ಮನೆಕೆಲಸ ಮತ್ತು ಆರೈಕೆಯಂತಹ ವೇತನವಿಲ್ಲದ ಕೆಲಸವನ್ನು 10 ಪಟ್ಟು ಹೆಚ್ಚಾಗಿ ಮಾಡುತ್ತಿದ್ದು, ವಿದ್ಯಾವಂತ ಮಹಿಳೆಯರು ತಮ್ಮ ಕೆಲಸದ ಹೊರೆ ನಿಯಂತ್ರಿಸುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದಾರೆಂದು ಕೂಡಾ ವರದಿ ಬಹಿರಂಗಪಡಿಸಿದೆ.

ಇನ್ನೊಂದು ಇಂಟರೆಸ್ಟಿಂಗ್ ಮಾಹಿತಿ ಏನೆಂದರೆ ಭಾರತದಲ್ಲಿ ಅವಿವಾಹಿತ ಮಹಿಳೆಯರು ವಿವಾಹಿತ ಮಹಿಳೆಯರಿಗಿಂತ ಕಡಿಮೆ ಕೆಲಸ ಮಾಡುತ್ತಿರುವುದು ಅಂದರೆ ಕೌಟುಂಬಿಕ ಜವಾಬ್ದಾರಿ ಬಂದ ನಂತರ ಮಾತ್ರ ಅವರು ಮನೆ ಕೆಲಸಕ್ಕೆ ಇಳಿಯುತ್ತಿರುವುದು ಸೋಜಿಗದ ವಿಷಯ. ಅವಿವಾಹಿತ ಮಹಿಳೆಯರಿಗೆ ಹೋಲಿಸಿದರೆ, ನಮ್ಮ ವಿವಾಹಿತ ಮಹಿಳೆಯರು, ಬಹುತೇಕ ದುಪ್ಪಟ್ಟು ಪ್ರಮಾಣದಲ್ಲಿ ವೇತನವಿಲ್ಲದ ಕೆಲಸದ ಹೊರೆ ಹೊಂದಿದ್ದಾರೆ ಅನ್ನುತ್ತಿದೆ ಈ ಸಂಶೋಧನೆ. ಅದರಲ್ಲೂ, ಹಿಂದು, ಮುಸ್ಲಿಂ ಮತ್ತು ಸಿಖ್ ಕುಟುಂಬಗಳ ಮಹಿಳೆಯರು ಹೆಚ್ಚಿನ ಸಮಯವನ್ನು ‘ವೇತನವಿಲ್ಲದ ಮನೆಕೆಲಸ’ಕ್ಕಾಗಿ ವ್ಯಯಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ವಿಶ್ವದ ಉಳಿದ ಕಡೆ ಮಹಿಳೆಯರ ಮನೆ ಕೆಲಸ ಪರಿಸ್ಥಿತಿ
ವಿಶ್ವಾದ್ಯಂತ ಮಹಿಳೆಯರು ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಸಮಯವನ್ನು ವೇತನರಹಿತ ಮನೆಕೆಲಸ ಮತ್ತು ಆರೈಕೆ ಕೆಲಸಗಳಲ್ಲಿ ಕಳೆಯುತ್ತಾರಂತೆ. ಆದರೆ, ಭಾರತದಲ್ಲಿನ ಮಹಿಳೆಯರು ಪುರುಷರಿಗಿಂತ ಸುಮಾರು 10 ಪಟ್ಟು ಹೆಚ್ಚು ಸಮಯವನ್ನು ಸಂಬಳವಿಲ್ಲದ ಕೆಲಸಕ್ಕಾಗಿ ಕಳೆಯುತ್ತಾರೆ” ಎಂದು ಅಧ್ಯಯನ ವಿವರಿಸಿದೆ. ಅದರಲ್ಲೂ ಶಾಲಾ ವಯಸ್ಸಿನ ಮಕ್ಕಳನ್ನು ಸಲಹುವುದಕ್ಕೆ ಮಹಿಳೆಯರು ಹೆಚ್ಚು ಸಮಯವನ್ನು ಕಳೆಯುತ್ತಾರೆ. ಅಲ್ಲದೆ, ವಿಭಕ್ತ ಕುಟುಂಬದಲ್ಲಿ ವಾಸಿಸುವ ಮಹಿಳೆಯರು, ಅಂದರೆ ಗಂಡ ಮತ್ತು ಮಕ್ಕಳ ಜೊತೆ ವಾಸಿಸುವ ಸಣ್ಣ ಕುಟುಂಬದ ಮಹಿಳೆಯರು, ಅವಿಭಕ್ತ ಕುಟುಂಬಗಳ ಮಹಿಳೆಯರಿಗಿಂತ ವೇತನವಿಲ್ಲದ ಕೆಲಸವನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಅಲ್ಲದೆ, ಸ್ತ್ರೀ ಪ್ರಧಾನ ಕುಟುಂಬಗಳಲ್ಲಿ ಮಹಿಳೆಯರ ವೇತನರಹಿತ ಕೆಲಸ ಕಡಿಮೆಯಿದೆ. ಅದಕ್ಕೆ ವಿರುದ್ಧವಾಗಿ ಪುರುಷ ಪ್ರಧಾನ ಕುಟುಂಬಗಳಲ್ಲಿ ಈ ಸಂಬಳರಹಿತ ಕೆಲಸದ ಹೊರೆ ಹೆಚ್ಚಾಗಿದೆ.

ಇದನ್ನೂ ಓದಿ: ಪ್ರಾಣ ಪ್ರತಿಷ್ಠೆ ನೆರವೇರಿಸಿದ ಪೇಜಾವರ ಶ್ರೀಗಳಿಗೆ ರಾಮ ದೇವರು ಹೇಳಿದ್ದೇನಂತೆ ಗೊತ್ತಾ ?! ಕೇಳಿದ್ರೆ ನೀವೂ ಭಾವಪರವಶರಾಗ್ತೀರಾ !!

ವಿಶ್ವದ ಆರ್ಥಿಕತೆಯಲ್ಲಿ ಮಹಿಳೆಯರ ಸಿಂಹಪಾಲು
ಈ ಮನೆ ಕೆಲಸಗಳ ವೇತನವಿಲ್ಲದ ಉದ್ಯೋಗಗಳನ್ನು ಮಾರುಕಟ್ಟೆ ಮೌಲ್ಯಗಳ ಆಧಾರದ ಮೇಲೆ ಅಳೆದುನೋಡಿದರೆ, ವಿಶ್ವದ ಆರ್ಥಿಕತೆಗೆ ಮಹಿಳೆಯರ ಕೊಡುಗೆಯು ಅಪಾರವಾಗಿದೆ ಎನ್ನುವ ಅಂಶವನ್ನು ಈ ವರದಿ ಗಮನ ಸೆಳೆದಿದೆ. ಆರ್ಥಿಕತೆಯ ಮೇಲೆ ಮಹಿಳೆಯರ ಪ್ರಭಾವ ಎಷ್ಟರಮಟ್ಟಿಗೆ ಇದೆಯೆಂದರೆ, ಕೆಲ ದೇಶಗಳಲ್ಲಿ ಮಹಿಳೆಯರ ವೇತನರಹಿತ ಕೆಲಸ ಆ ದೇಶದ ಜಿಡಿಪಿಗೆ ಶೇ.10 ರಷ್ಟು ಕೊಡುಗೆ ನೀಡಿದರೆ, ಇನ್ನೂ ಕೆಲವು ರಾಷ್ಟ್ರಗಳಲ್ಲಿ ಜಿಡಿಪಿಗೆ ಅವರ ಕೊಡುಗೆ ಶೇ.60 ಎಂದು ಲೆಕ್ಕಾಚಾರ ಮಾಡಲಾಗಿದೆ. ಮತ್ತೊಂದು ಗುದುಹೋದ ಅಂಶವೇನೆಂದರೆ, ನಗರ ಪ್ರದೇಶದ ಶಿಕ್ಷಣ ಇಲ್ಲದ ಮಹಿಳೆಯರು ಹೆಚ್ಚು ಮನೆ ಕೆಲಸ ಮಾಡುತ್ತಿರುವುದು. ಶಿಕ್ಷಣವಿಲ್ಲದ ನಗರ ಪ್ರದೇಶದ ಮಹಿಳೆಯರು, ಶಿಕ್ಷಣವಿಲ್ಲದ ಗ್ರಾಮೀಣ ಪ್ರದೇಶದ ಮಹಿಳೆಯರಿಗಿಂತ ಶೇಕಡಾ 86.7 ಕ್ಕಿಂತಲೂ ಹೆಚ್ಚು ಸಮಯ ಸಂಬಳವಿಲ್ಲದ ಮನೆಕೆಲಸದಲ್ಲಿ ಕಳೆಯುತ್ತಾರೆಂದು ವರದಿ ತಿಳಿಸಿದೆ. ಒಟ್ಟಾರೆ ಮಹಿಳೆಯರು, ತಮಗೆ ಶಿಕ್ಷಣ ಇಲ್ಲದೆ ಹೋದರೂ ವಿಶ್ವದ ಆರ್ಥಿಕತೆಯಲ್ಲಿ ಸಿಂಹಪಾಲು ಪಡೆದು ಕೊಳ್ಳುತ್ತಿರುವುದು ಗಮನಾರ್ಹ.

Comments are closed.