ಅಪ್ಪ- ಮಗಳ ಸಂಬಂಧದ ಬಗೆಗೆ ಯಾವುದೇ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮಗಳು ಏನೇ ಕೇಳಿದರೂ ಕೂಡ ಎಲ್ಲವನ್ನೂ ಕೊಡಿಸುವ ಸಾಹುಕಾರ ಅಪ್ಪ. ಅಂತೆಯೇ ಇಲ್ಲೊಬ್ಬ ಅಪ್ಪ ತನ್ನ ಮಗಳು ಹೇಳಿದ್ದನ್ನು ಕೊಡಿಸಲು ಕೇವಲ ಐದು ನಿಮಿಷಕ್ಕೆ ಬರೋಬ್ಬರಿ 3.8 ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದಾನೆ.


ಹೌದು, ದುಬೈನ ಶೇಖ್ ಒಬ್ಬರು ತಮ್ಮ ಪುಟ್ಟ ಮಗಳ ಆಸೆ ಈಡೇರಿಸಲು ಜಸ್ಟ್ 5 ನಿಮಿಷಗಳಲ್ಲಿ ಬರೋಬ್ಬರಿ 3.85 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಅಷ್ಟಕ್ಕೂ ಮಗಳು ಕೇಳಿದ್ದು ಬೇರೆ ಯಾವುದೇ ದುಬಾರಿ ವಸ್ತುವಲ್ಲ. ಬದಲಿಗೆ ಒಂದು ಹಕ್ಕಿಯನ್ನಷ್ಟೇ!! ಹಾಗಿದ್ದರೆ ಅಷ್ಟಕ್ಕೂ ಅಲ್ಲಿ ನಡೆದದ್ದು ಏನು? ಆ ಒಂದು ಹಕ್ಕಿಗೆ ಅಷ್ಟೊಂದು ಬೆಲೆ ಏಕೆ ಇಲ್ಲಿದೆ ನೋಡಿ ಡೀಟೇಲ್ಸ್.
ಅಬುಧಾಬಿ ಅಂತಾರಾಷ್ಟ್ರೀಯ ಬೇಟೆ ಮತ್ತು ಕುದುರೆ ಸವಾರಿ ಪ್ರದರ್ಶನದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಅಮೆರಿಕಾದಲ್ಲಿ ಬೆಳೆಸಲಾದ ‘ಖಾರ್ಮೌಶಾ ಪ್ಯೂರ್ ಅಲ್ಟ್ರಾ ವೈಟ್’ ಎಂಬ ಅಪರೂಪದ ಬಿಳಿ ಫಾಲ್ಕನ್ (ಡೇಗೆ) ಹರಾಜಿನಲ್ಲಿ ಬರೋಬ್ಬರಿ 1.5 ಮಿಲಿಯನ್ ಯುಎಇ ದಿರ್ಹಮ್ಗಳಿಗೆ ಮಾರಾಟವಾಗಿದೆ. ಭಾರತೀಯ ರೂಪಾಯಿಗಳಲ್ಲಿ ಇದರ ಮೌಲ್ಯ ಸುಮಾರು 3.85 ಕೋಟಿ ರೂಪಾಯಿಗಳು. ಈ ಹರಾಜು ಪ್ರಕ್ರಿಯೆಯಲ್ಲಿ, ತನ್ನ ಮಗಳು ಈ ಅಪರೂಪದ ಹಕ್ಕಿಯನ್ನು ಕಂಡು ಇಷ್ಟಪಟ್ಟಿದ್ದರಿಂದ, ಆ ತಂದೆ ಎಷ್ಟೇ ಹಣವಾದರೂ ಪರವಾಗಿಲ್ಲ ಎಂದು ಕೇವಲ 5 ನಿಮಿಷಗಳಲ್ಲಿ ಹರಾಜನ್ನು ಗೆದ್ದು ಮಗಳ ಆಸೆಯನ್ನು ಪೂರೈಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ತಂದೆಯ ಪ್ರೀತಿ ಅಳೆಯಲಾಗದ್ದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಹಕ್ಕಿಯ ವಿಶೇಷತೆ ಏನು?
ಈ ವರ್ಷದ ADIHEX ಹರಾಜಿನಲ್ಲಿ ಈ ಹಕ್ಕಿ ಅತ್ಯಂತ ಹೆಚ್ಚಿನ ಬೆಲೆಗೆ ಮಾರಾಟವಾದ ದಾಖಲೆ ಬರೆದಿದೆ. ಇದರ ವಿಶೇಷತೆಗಳನ್ನ ನೋಡೋದಾದ್ರೆ ಇದು ಸಂಪೂರ್ಣವಾಗಿ ಬಿಳಿ ಬಣ್ಣದ ಗರಿಗಳನ್ನು ಹೊಂದಿದ್ದು, ನೋಡಲು ಅತ್ಯಂತ ಆಕರ್ಷಕವಾಗಿದೆ. ಇದರ ತೂಕ ಸುಮಾರು 1,000 ಗ್ರಾಂ ಇದ್ದು, 16.5 ಇಂಚು ಉದ್ದ ಮತ್ತು 16.5 ಇಂಚು ಅಗಲವಿದೆ. ಅಮೆರಿಕಾದ ಮಾರ್ಕ್ ಮೊಗ್ಲಿಚ್ ಫಾಲ್ಕನ್ ಫಾರ್ಮ್ನಲ್ಲಿ ಇದನ್ನು ವಿಶೇಷವಾಗಿ ಬೆಳೆಸಲಾಗಿದೆ. ಇದರ ಶಾರೀರಿಕ ರಚನೆ ಮತ್ತು ಬೇಟೆಯಾಡುವ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದು ಹೇಳಲಾಗುತ್ತಿದೆ.

