Home » ಬೆಳಗಾವಿ : ಕೋಟ್ಯಂತರ ರೂ. ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ 80ರ ಕಿಲಾಡಿ ಅಜ್ಜಿ!!

ಬೆಳಗಾವಿ : ಕೋಟ್ಯಂತರ ರೂ. ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ 80ರ ಕಿಲಾಡಿ ಅಜ್ಜಿ!!

0 comments

ವಯಸ್ಸು ಮೀರಿದಂತೆ ಮನುಷ್ಯನಿಗೆ ಆಸೆ, ಆಕಾಂಕ್ಷೆ ಗಳೆಲ್ಲವೂ ಬತ್ತಿ ಹೋಗುತ್ತದೆ ಎಂದು ಹೇಳುವುದುಂಟು. ಆದರೆ ಬೆಳಗಾವಿಯಲ್ಲಿ ಒಬ್ಬಳು 80 ವರ್ಷದ ಕಿಲಾಡಿ ಅಜ್ಜಿ ಮಾಡಿರುವ ಕತರ್ನಾಕ್ ಕೆಲಸವನ್ನು ಕೇಳಿದರೆ ನೀವೇ ಶಾಕ್ ಆಗುತ್ತೀರಿ.

ಹೌದು, ಬೆಳಗಾವಿಯಲ್ಲಿ ಒಬ್ಬಳು 80 ವರ್ಷದ ಕತರ್ನಾಕ್ ಅಜ್ಜಿ ತನ್ನ ನೆರೆಹೊರೆಯವರ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಮೀನುಗಳ ನಕಲಿ ದಾಖಲೆಯನ್ನು ಸೃಷ್ಟಿಸಿ ಮಾರಾಟ ಮಾಡಿ, ಕೋಟ್ಯಾಂತರ ರೂಪಾಯಿಯನ್ನು ಕಪಟಾಯಿಸಿ ತಗಲಾಕ್ಕೊಂಡಿದ್ದಾಳೆ.  

ವಡಗಾಂವ ಗಣೇಶ ಕಾಲೋನಿ ನಿವಾಸಿ ಮಂದಾಕಿನಿ ಪರಿಶವಾಡಕರ್​ ಎನ್ನುವ ವೃದ್ಧೆಯೇ ಈ ಕೆಲಸ ಮಾಡಿರುವ 80ರ ಲಲಲಾಮಣಿ. ಈಕೆ ತನ್ನ ಗ್ರಾಮದಲ್ಲಿ ಇರುವ ಅಕ್ಕ-ಪಕ್ಕದ ಜಮೀನುಗಳ ಒಡತಿ ತಾನೇ ಎಂದು ಬಿಂಬಿಸಿ, ಅದರ ನಕಲಿ ದಾಖಲೆಗಳನ್ನೂ ಸೃಷ್ಟಿಸಿ ಮಾರಾಟ ಮಾಡಿದ್ದಾಳೆ. ಕೊನೆಗೆ ಜಮೀನಿನ ಮಾಲೀಕರೊಬ್ಬರು ಸಲ್ಲಿಸಿದ ಕಂಪ್ಲೇಂಟ್​ ಆಧಾರದ ಮೇಲೆ ಪೊಲೀಸರು ಈಕೆಯ ಜಾತಕ ಬಿಚ್ಚಿದಾಗ, ಒಂದೊಂದೇ ಬಯಲಿಗೆ ಬಂದಿದೆ. ಸದ್ಯ ಈಕೆ ಮಾರ್ಕೆಟ್ ಠಾಣೆ ಪೊಲೀಸರ ಅತಿಥಿಯಾಗಿದ್ದಾಳೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ

ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿರುವ ಪ್ಲಾಟ್ ನಂ.2313 ಹಾಗೂ ಸಿಟಿಎಸ್ ನಂ.944ರ ಜಾಗ ರತ್ನಾ ಯಶವಂತ ಮಲ್ಯೂಕರ ಎನ್ನುವವರ ಹೆಸರಿನಲ್ಲಿತ್ತು. ಈ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡುವ ಉದ್ದೇಶದಿಂದ ಮಂದಾಕಿವಿ, ರತ್ನಾ ಅವರಂತೆ ನಟನೆ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿದಳು. ಕೊನೆಗೆ ಸಾಲದು ಎನ್ನುವುದಕ್ಕೆ 2003ರಲ್ಲಿ ಬೆಳಗಾವಿ ಉತ್ತರ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿದ ಆರೋಪಿ ಈಕೆ, ಅವರದ್ದೇ ಹೆಸರಿನಲ್ಲಿ ವೆಬ್ ಕ್ಯಾಮೆರಾದಲ್ಲಿ ಫೋಟೊ ತೆಗೆಸಿಕೊಂಡಿದ್ದಳು. ಮಾತ್ರವಲ್ಲದೇ, ಅವರ ಹೆಸರಿನಲ್ಲಿ ಹೆಬ್ಬೆರಳು ಗುರುತು ಹಾಗೂ ಸಹಿ ನೀಡಿ ಜಾಗವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಳು. 

ಇದು ಕೊನೆಗೆ ಮಾಲೀಕರ ಗಮನಕ್ಕೆ ಬಂದಾಗ, ಈಕೆಯ ಒಂದೊಂದೇ ಕಿತಾಪತಿ ಬಯಲಿಗೆ ಬಂದಿದೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂದಾಕಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ಅಂಶಗಳು ಬಹಿರಂಗಗೊಂಡಿವೆ.

You may also like